ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಪಣಜಿ: ಗೋವಾ ರಾಜ್ಯದ 40 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಮತದಾನದಲ್ಲಿ ಶೇಕಡಾ 83ರಷ್ಟು ದಾಖಲೆಯ ಮತದಾನವಾಗಿದೆ. ಮತದಾನ ಶಾಂತಿಯುತವಾಗಿ ನಡೆದಿದೆ.
ಇಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳಾದ ಕಾಂಗ್ರೆಸ್, ಆಪ್. ಎಂಜಿಪಿ, ಶಿವಸೇನಾ ಮತ್ತು ಜಿಎಸ್ಎಮ್ ಮೈತ್ರಿಕೂಟಗಳ ನಡುವೆ ಹಣಾಹಣಿ ಏರ್ಪಟ್ಟಿದೆ.
ಗಣಿಗಾರಿಕೆ ಪ್ರದೇಶಗಳಾದ ಸಂಖಲಿಮ್, ಬಿಚೊಲಿಮ್ ಮತ್ತು ಕುರ್ಚೊರೆಮ್ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದ್ದಾರೆ.
ಎಲೆಕ್ಟ್ರಾನಿಕ್ ಮತ ಯಂತ್ರ ಕೆಟ್ಟು ಹೋಗಿ ಒಂದು ಮತಗಟ್ಟೆಯಲ್ಲಿ ಮತದಾನ ರದ್ದಾಗಿದ್ದು ಬಿಟ್ಟರೆ ಉಳಿದ ಕಡೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ನಡೆದಿದೆ.
ಪಣಜಿ ನಗರದಲ್ಲಿ 78 ವರ್ಷದ ಲೆಸ್ಲಿ ಸಾಲ್ದಾನಾ ಎಂಬ ವಯೋವೃದ್ಧರೊಬ್ಬರು ಮತಗಟ್ಟೆಯ ಹೊರಗೆ ಮತದಾನ ಮಾಡಲು ನಿಂತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟರು.
ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ 11.10 ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಿದ್ದು ಸಾಯಂಕಾಲದ ವೇಳೆಗೆ ಶೇಕಡಾ 83ರಷ್ಟು ಮತದಾನವಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುತಿಸಿಕೊಂಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ಸಚಿವ ಶ್ರೀಪಾದ್ ನ್ಯಾಕ್, ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಮೊದಲಾದವರು ಇಂದು ಮತದಾನ ಮಾಡಿದವರಲ್ಲಿ ಪ್ರಮುಖರು.
ಒಟ್ಟು 250 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಇಂದಿನ ಚುನಾವಣೆ ಗೋವಾದ ಮಾಜಿ ಮುಖ್ಯ ಮಂತ್ರಿಗಳಾದ ಚುರ್ಚಿಲ್ಲ್ ಅಲೆಮಾವೊ, ಪ್ರತಾಪ್ ಸಿನ್ಪ್ ರಾಣೆ, ರವಿ ನ್ಯಾಕ್, ದಿಗಂಬರ್ ಕಾಮತ್ ಮತ್ತು ಲೂಯಿಝಿನ್ಹೊ ಫಲೈರೊ ಮತ್ತು ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರ ಭವಿಷ್ಯ ನಿರ್ಧರಿಸಲಿದೆ.
ಬಿಜೆಪಿಯ 36 ಅಭ್ಯರ್ಥಿಗಳು, ಕಾಂಗ್ರೆಸ್ ನ 37, ಆಪ್ ನ 39 ಮತ್ತು ಇತರ ಸ್ವತಂತ್ರ ಅಭ್ಯರ್ಥಿಗಳು ಹುರಿಯಾಳಾಗಿದ್ದಾರೆ.ಮತ ಎಣಿಕೆ ಮಾರ್ಚ್ 11ರಂದು ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics