ಮೀರತ್ ನಲ್ಲಿ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಮೀರತ್: ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಕಾಮ್(ಕನ್ನಡದಲ್ಲಿ ಹಗರಣ) ವಿರುದ್ಧ ಹೋರಾಡುತ್ತದೆ. ಸ್ಕಾಮ್ ಎಂದರೇನು ಎಂದು ವಿಸ್ತರಿಸಿ ಹೇಳಿದ ಪ್ರಧಾನಿ ಎಸ್-ಸಮಾಜವಾದಿ, ಸಿ-ಕಾಂಗ್ರೆಸ್, ಎ-ಅಖಿಲೇಶ್ ಯಾದವ್, ಎಮ್-ಮಾಯಾವತಿ ಅವರ ವಿರುದ್ಧ ಎಂದು ವ್ಯಾಖ್ಯಾನಿಸಿದರು.
ಅವರು ಇಂದು ಉತ್ತರ ಪ್ರದೇಶದ ಮೀರತ್ ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ, ಉತ್ತರ ಪ್ರದೇಶ ಜನರಲ್ಲಿ ನಿಮಗೆ ಸ್ಕ್ಯಾಮ್ ಬೇಕೆ ಅಥವಾ ಬಿಜೆಪಿಯೇ ನೀವು ಆಯ್ಕೆ ಮಾಡಿಕೊಳ್ಳಿ. ಬಿಜೆಪಿಯ ಹೋರಾಟ ಸ್ಕಾಮ್ ವಿರುದ್ಧ ಎಂದರು.
ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಅಭಿವೃದ್ಧಿಗೆ ಅನುದಾನ ಕಳುಹಿಸುತ್ತದೆ, ಆದರೆ ಅದನ್ನು ಸಮಾಜವಾದಿ ಪಕ್ಷ, ರಾಜ್ಯ ಸರ್ಕಾರ ಸರಿಯಾಗಿ ಬಳಸುತ್ತಿಲ್ಲ. ಹಣ ಬೇರೆಲ್ಲಿಯೋ ಹೋಗುತ್ತದೆ. ಬಡವರು, ನಿರ್ಗತಿಕರ ಕಲ್ಯಾಣಕ್ಕೆ ಹಣ ಸದ್ಭಳಕೆಯಾಗುತ್ತಿಲ್ಲ. ಇದರಿಂದ ರಾಜ್ಯ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದು ಆರೋಪಿಸಿದರು.
ಆರೋಗ್ಯ ಸುಧಾರಣೆಗೆ ಸಹಾಯವಾಗುವಂತೆ 400ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ಆದರೆ ಅಖಿಲೇಶ್ ಯಾದವ್ ಇದರಲ್ಲಿ ಕನಿಷ್ಠ 250ಕೋಟಿ ಹಣವನ್ನು ಬಡವರ ಉದ್ಧಾರಕ್ಕಾಗಿ ಬಳಕೆ ಮಾಡಿಲ್ಲ. ನಂತರದ ದಿನಗಳಲ್ಲಿ ನೀಡಲಾದ ಒಟ್ಟು 7000ಕೋಟಿ ಅನುದಾನದಲ್ಲಿ ಬಳಕೆಯಾಗಿರುವುದು ಕೇವಲ 280ಕೋಟಿ ಮಾತ್ರ. ಕೇಂದ್ರದಿಂದ ಅನುದಾನ ದೊರೆತರೂ ರಾಜ್ಯ ಸರ್ಕಾರಕ್ಕೆ ಅದನ್ನು ಬಳಸುವ ಅಥವಾ ರಾಜ್ಯದ ಏಳಿಗೆಗಾಗಿ ಶ್ರಮಿಸುವ ಯಾವುದೇ ಉದ್ದೇಶವಿಲ್ಲ ಎಂದು ಟೀಕಿಸಿದ್ದಾರೆ.
ನಮ್ಮನ್ನು ಉಳಿಸಿ ಎಂದು ಸಮಾಜವಾದಿ ಹಾಗೂ ಕಾಂಗ್ರೆಸ್ ಜನರ ಬಳಿ ಅಂಗಲಾಚುತ್ತಿದೆ. ತಮ್ಮನ್ನು ತಾವು ಉಳಿಸಿಕೊಳ್ಳಲಾಗದವರು ಜನರನ್ನು ಹೇಗೆ ರಕ್ಷಿಸುತ್ತಾರೆ ಎಂದು ಸಮಾಜವಾದಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಉದ್ದೇಶಿಸಿ ಹೇಳಿದರು.
ಸೀಮಿತ ದಾಳಿಯ ಬಗ್ಗೆ ಮಾತನಾಡಿದ ಅವರು, ನಮ್ಮ ಸೈನಿಕರು ಹೇಗೆ ಪಾಕಿಸ್ತಾನದ ಗಡಿದಾಟಿ ಉಗ್ರರನ್ನು ಸದೆಬಡಿದಿದ್ದರು ಮತ್ತು ಆಗ ನಮ್ಮ ದೇಶದ ಯಾವೊಬ್ಬ ಸೈನಿಕನೂ ಹತನಾಗಿರಲಿಲ್ಲ ಎಂಬುದು ದೇಶದ ಜನತೆಗೆ ಗೊತ್ತಿದೆ. ಕೆಲವು ಪಕ್ಷಗಳು ದೇಶದಲ್ಲಿ ನೋಟು ರದ್ದತಿ ಕ್ರಮದ ಬಳಿಕ ತಮ್ಮ ಅಕ್ರಮ ಸಂಪತ್ತನ್ನು ಕಳೆದುಕೊಂಡು ಗೊಂದಲಕ್ಕೊಳಗಾಗಿವೆ ಎಂದು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವನ್ನು ಕುರಿತು ವ್ಯಂಗ್ಯವಾಡಿದರು.
ಉತ್ತರ ಪ್ರದೇಶದಲ್ಲಿ ಉತ್ತಮ ಆಹಾರ, ಹವಾಮಾನವಿದೆ. ಇಲ್ಲಿ ಕಷ್ಟಪಟ್ಟು ಕೆಲಸ ಮಾಡುವ ರೈತರು, ದೃಢ ಮನಸ್ಸಿನ ಜನರಿದ್ದಾರೆ. ಆದರೆ ಉತ್ತರ ಪ್ರದೇಶ ಕಳೆದ ಕೆಲವು ವರ್ಷಗಳಿಂದ ಪ್ರಗತಿಯಲ್ಲಿ ಕ್ಷೀಣಿಸುತ್ತಿದೆ. ಇಲ್ಲಿನ ಯುವಕರು ತಮ್ಮ ಕುಟುಂಬದವರನ್ನು ತೊರೆದು ನಗರಗಳಲ್ಲಿ ಕೊಳಚೆ ಪ್ರದೇಶಗಳಲ್ಲಿ ಜೀವಿಸಬೇಕಾದ ಪರಿಸ್ಥಿತಿ ಏಕೆ ಬಂದಿದೆ ಎಂದು ಯೋಚಿಸಬೇಕಾಗಿದೆ ಎಂದರು.
ಅಂದು ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಇಲ್ಲಿ ಯುದ್ಧ ಮಾಡಿದೆವು. ಇಂದು ಬಡತನವನ್ನು ಹೋಗಲಾಡಿಸಲು ಹೋರಾಟ ಮಾಡುತ್ತಿದ್ದೇವೆ. ಮಾಫಿಯಾ, ಗೂಂಡಾಗಿರಿ, ಅತ್ಯಾಚಾರಿಗಳ ವಿರುದ್ಧ ಇಂದು ಹೋರಾಟ ಮಾಡಬೇಕಾಗಿ ಬಂದಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
1857ರಲ್ಲಿ ಸ್ವಾತಂತ್ರ್ಯ ಸಂಗ್ರಾಮ ಮೀರತ್ ನಲ್ಲಿ ಆರಂಭವಾಯಿತು. ಇಂದು ಅದೇ ಪ್ರದೇಶಲ್ಲಿ ನಿಂತು ಮಾತನಾಡಲು ಸಿಕ್ಕಿರುವುದು ನನ್ನ ಅದೃಷ್ಟ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೀರತ್ ನಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇನೆ. ಉತ್ತರ ಪ್ರದೇಶ ನನ್ನನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿತು.ಇಲ್ಲಿನ ಜನರು ನನಗೆ ಪ್ರೀತಿ ತೋರಿಸಿದ್ದಾರೆ. ಭಾರತದ ಕೀರ್ತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೇನೆ. ನನಗೆ ಎಲ್ಲವನ್ನೂ ಕೊಟ್ಟ ಉತ್ತರ ಪ್ರದೇಶದ ಋಣ ತೀರಿಸಬೇಕಾಗಿದೆ ಎಂದರು.
ಮೀರತ್ ದೇಶದಲ್ಲಿಯೇ ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡಾಪಟುಗಳನ್ನು ಕಂಡ ನಾಡು. ಆದರೆ ಇಂದು ಇಲ್ಲಿ ಕೊಲೆ, ಸುಲಿಗೆ ನಡೆಯುತ್ತಿವೆ. ಹಿಂದೆ ಸಮಾಜವಾದಿ ಪಕ್ಷವನ್ನು ರಾಜ್ಯವನ್ನು ನಾಶಪಡಿಸಿದವರು ಎಂದು ಟೀಕಿಸಿದ ಕಾಂಗ್ರೆಸ್ ಇಂದು ಅದೇ ಪಕ್ಷದೊಂದಿಗೆ ಕೈ ಜೋಡಿಸಿದೆ. ಹಾಗಾದರೆ ಅದಕ್ಕೆ ನೈತಿಕತೆ ಎಲ್ಲಿದೆ ಎಂದು ಪ್ರಧಾನಿ ಪ್ರಶ್ನಿಸಿದರು.
ಉತ್ತರ ಪ್ರದೇಶದಲ್ಲಿ ಇದೇ 11ರಿಂದ ಮಾರ್ಚ್ 8ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics