ದೇಶ

ಭಾರತದೊಂದಿಗೆ ವಿಲೀನ: ಜನಾಭಿಪ್ರಾಯ ಸಂಗ್ರಹಿಸುವಂತೆ ಪಾಕ್'ಗೆ ರಾಜನಾಥ್ ಸಲಹೆ

Manjula VN

ಹರಿದ್ವಾರ: ಭಾರತದೊಂದಿಗೆ ವಿಲೀನಗೊಳ್ಳಬೇಕೋ ಅಥವಾ ಬೇಡವೋ ಎಂಬುದರ ಕುರಿತಂತೆ ಪಾಕಿಸ್ತಾನ ಮೊದಲು ತನ್ನ ರಾಷ್ಟ್ರದ ಜನತೆಯ ಅಭಿಪ್ರಾಯಗಳನ್ನು ಸಂಗ್ರಹಿಸಬೇಕಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭಾನುವಾರ ಹೇಳಿದ್ದಾರೆ.

ಹರಿದ್ವಾರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡಿರುವ ಅವರು, ಕಾಶ್ಮೀರದ ಭಾರತದ ಅವಿಭಾಜ್ಯ ಅಂಗವಾಗಿದ್ದು, ಎಂದಿಗೂ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಅದನ್ನು ಯಾವ ಶಕ್ತಿಯಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಕಾಶ್ಮೀರ ವಿಚಾರದ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಮೊದಲು ಭಾರತದೊಂದಿಗೆ ವಿಲೀನಗೊಳ್ಳಬೇಕೋ ಅಥವಾ ಇಲ್ಲವೋ ಎಂಬುದರ ಬಗ್ಗೆ ತನ್ನ ರಾಷ್ಟ್ರದ ಜನರ ಅಭಿಪ್ರಾಯವನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನಕ್ಕೆ ಒಂದನ್ನು ಹೇಳಲು ಇಚ್ಛಿಸುತ್ತೇನೆ. ಭಾರತ ಎಂದಿಗೂ ಶಾಂತಿಯುತ ದ್ವಿಪಕ್ಷೀಯ ಸಂಬಂಧವನ್ನು ಬಯಸುತ್ತದೆ. ಆದರೆ, ಈ ಸಂಬಂಧವನ್ನು ಇಸ್ಲಾಮಾಬಾದ್ ಹಾಳು ಮಾಡುತ್ತಲೇ ಬಂದಿದೆ. ಪಾಕಿಸ್ತಾನ ಮೊದಲು ಪ್ರಚೋದನೆ ನೀಡುತ್ತಿರುವ ತನ್ನ ಭಯೋತ್ಪಾದನೆ ನಿಲ್ಲಿಸುವ ಅಗತ್ಯವಿದೆ. ಕಾಶ್ಮೀರ ವಿಚಾರ ಕುರಿತಂತೆ ಪಾಕಿಸ್ತಾನ ಮೊದಲು ತನ್ನ ರಾಷ್ಟ್ರದ ಜನಾಭಿಪ್ರಾಯವನ್ನು ಸಂಗ್ರಹಿಸುವ ಅಗತ್ಯವಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸುವ ಮೂಲಕ ನಾವೂ ಕೂಡ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬಲ್ಲೆವು ಎಂಬುದನ್ನು ಭಾರತ ಇಡೀ ವಿಶ್ವಕ್ಕೆ ತೋರಿಸಿದೆ. ಭಾರತ ಶಾಂತಿಯನ್ನು ಪ್ರೀತಿಸುವ ದೇಶವಾಗಿದೆ. ಭಾರತ ವಿರುದ್ಧ ಷಡ್ಯಂತ್ರ ರೂಪಿಸುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಗಳು ಎದುರಾಗಿದ್ದೇ ಆದರೆ, ಭಾರತ ಮೃದುರಾಷ್ಟ್ರವಾಗಿಯೇ ಮುಂದುವರೆಯುವುದಿಲ್ಲ ಎಂದು ತಿಳಿಸಿದ್ದಾರೆ.

SCROLL FOR NEXT