ಸಂಗ್ರಹ ಚಿತ್ರ 
ದೇಶ

ತ.ನಾಡಿನ ಮೂರನೇ ಮಹಿಳಾ ಸಿಎಂ ಆಗಿ ಆಯ್ಕೆಯಾಗಿರುವ "ಚಿನ್ನಮ್ಮ"ನ ಹಿನ್ನಲೆ!

ವಿಕೆ ಶಶಿಕಲಾ ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತ ಸ್ನೇಹಿತೆಯಾಗಿದ್ದು, ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಚೆನ್ನೈ: ವಿಕೆ ಶಶಿಕಲಾ ತಮಿಳುನಾಡು ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಆಪ್ತ ಸ್ನೇಹಿತೆಯಾಗಿದ್ದು, ಇದೀಗ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಜಯಲಲಿತಾ ಮಾದರಿಯಲ್ಲೇ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಬಳಿಕ ಶಿಶಕಲಾ ಸಿಎಂ ಪಟ್ಟಕ್ಕೇರಿದ್ದಾರೆ. ಜಯ ಬಿಟ್ಟು ಹೋಗಿರುವ ಸಿಎಂ ಸ್ಥಾನಕ್ಕೇರಲು ಸಿದ್ಧವಾಗಿರುವ ಚಿನ್ನಮ್ಮ ಶಶಿಕಲಾ, ತಮಿಳುನಾಡಿನ ಮೂರನೇ ಮಹಿಳಾ ಸಿಎಂ ಆಗಿ ನೇಮಕವಾಗಿದ್ದಾರೆ. ಈ ಹಿಂದೆ 1988ರಲ್ಲಿ ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ ಪತ್ನಿ ಜಾನಕಿ ರಾಮಚಂದ್ರನ್ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಬಳಿಕ ನಡೆದ ರಾಜಕೀಯ ಪ್ರಹಸನದಿಂದಾಗಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತದೆ. 1995ರಲ್ಲಿ ಜೆ ಜಯಲಲಿತಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಜಯ ಬಳಿಕ ಮೂರನೇ ಮಹಿಳೆಯಾಗಿ ಶಶಿಕಲಾ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಿದ್ಧತೆ ನಡೆಸಿದ್ದಾರೆ.

ಜಯಲಲಿತಾ ಆಪ್ತ ಗೆಳತಿ ಶಶಿಕಲಾ ಅವರ ಹಿನ್ನಲೆ ಕುರಿತ ಒಂದಷ್ಟು ಮಾಹಿತಿ ಇಲ್ಲಿದೆ.

ಹೆಸರು ವಿಕೆ ಶಶಿಕಲಾ. ಹುಟ್ಟಿದ್ದು ಜನವರಿ 29, 1956 ರಲ್ಲಿ ತಮಿಳುನಾಡಿನ ತಿರುವರೂರ್ ನ ತಿರುತ್ತುರೈಪೋಂಡಿಯಲ್ಲಿ. ತಂದೆ ವಿವೇಕನಂದನ್ ಮತ್ತು ತಾಯಿ ಕೃಷ್ಣವೇಣಿ. ಬಳಿಕ ವಿವೇಕಾನಂದನ್ ಕುಟಂಬ ಮನ್ನಾರ್ ಗುಡಿಗೆ  ಸ್ಥಳಾಂತರವಾಯಿತು. ಕಾರಣಾಂತರಗಳಿಂದ ಶಶಿಕಲಾ ಪ್ರಾಥಮಿಕ ಶಿಕ್ಷಣದ ಬಳಿಕ ವಿದ್ಯಾಭ್ಯಾಸವನ್ನು ಮೊಟಕುಗೊಳಿಸದರು. ಬಳಿಕ ತಾತ್ಕಾಲಿಕ ಸರ್ಕಾರಿ ಸೇವೆಯಲ್ಲಿದ್ದ ನಟರಾಜನ್ ಅವರ ಜೊತೆ ವಿವಾಹವಾಯಿತು.

ಅಂದಿನ ತಮಿಳುನಾಡು ಸಿಎಂ ಆಗಿದ್ದ ಎಂ ಕರುಣಾನಿಧಿ ಅವರ ಸರ್ಕಾರದಲ್ಲಿ ನಟರಾಜನ್ ಸರ್ಕಾರದ ಸಾರ್ವಜನಿಕ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರು. ಹೀಗಾಗಿ ಕರುಣಾನಿಧಿ ಸಮ್ಮುಖದಲ್ಲೇ ಶಶಿಕಲಾ ಹಾಗೂ ನಟರಾಜನ್  ವಿವಾಹವಾಗಿದ್ದು ವಿಶೇಷ. ಅಂದಿನ ಕುಡಲೂರು ಜಿಲ್ಲಾಧಿಕಾರಿ ವಿಎಸ್ ಚಂದ್ರಲೇಖಾ ಅವರ ಸಹಾಯಕರಾಗಿ ನಟರಾಜನ್ ಸೇವೆ ಸಲ್ಲಿಸುತ್ತಿದ್ದರು. ಐಎಎಸ್ ಅಧಿಕಾರಿ ವಿಎಸ್ ಚಂದ್ರಲೇಖಾ ಅವರು ಮಾಜಿ ಮುಖ್ಯಮಂತ್ರಿ ಎಂಜಿ  ರಾಮಚಂದ್ರನ್ ಅವರ ಆಪ್ತ ಅಧಿಕಾರಿಗಳಲ್ಲಿ ಒಬ್ಬರಾಗಿದ್ದರು.

1976ರ ತುರ್ತು ಪರಿಸ್ಥಿತಿ ವೇಳೆ ಶಶಿಕಲಾ ಪತಿ ನಟರಾಜನ್ ಕೆಲಸ ಕಳೆದುಕೊಳ್ಳಬೇಕಾಯಿತು. ಬಳಿಕ 1980ರಲ್ಲಿ ನಟರಾಜನ್ ಕೆಲಸಕ್ಕೆ ಮರು ಸೇರ್ಪಡೆಯಾದರೂ, ಕುಟುಂಬ ನಿರ್ವಹಣೆಗೆ ಶಶಿಕಲಾ ವಿಡಿಯೋ ಕ್ಯಾಮರಾ  ರೆಂಟಿಂಗ್ ಹಾಗೂ ರೆಕಾರ್ಡಿಂಗ್ ಅಂಗಡಿ ತೆರೆದರು. ಇದೇ ವೇಳೆ 1980ರಲ್ಲಿ ಅಂದಿನ ದಕ್ಷಿಣ ಆರ್ಕಟ್ ಜಿಲ್ಲಾಧಿಕಾರಿಯಾಗಿದ್ದ ವಿಎಸ್ ಚಂದ್ರಲೇಖಾ ಅವರಿಗೆ ನಟರಾಜನ್ ಜಯಲಲಿತಾ ಅವರಿಗೆ ಶಶಿಕಲಾರನ್ನು ಪರಿಚಯಿಸುವಂತೆ  ಮನವಿ ಮಾಡುತ್ತಾರೆ. 1980ರಲ್ಲಿ ಜಯಲಲಿತಾ ಎಐಎಡಿಎಂಕೆ ಪಕ್ಷದ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳ ವಿಡಿಯೋ ರೆಕಾರ್ಡಿಂಗ್ ಆರ್ಡರ್ ನೀಡುವಂತೆ ಶಶಿಕಲಾ ಜಯಾಗೆ ಮನವಿ  ಮಾಡಿಕೊಳ್ಳುತ್ತಾರೆ.

ಶಶಿಕಲಾ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಜಯಾ ಅದಕ್ಕೆ ಒಪ್ಪಿಗೆ ನೀಡುತ್ತಾರೆ. ಬಳಿಕ ತಮಿಳುನಾಡಿನಲ್ಲಿ ನಡೆಯುವ ಪಕ್ಷದ ವಿವಿಧ ಕಾರ್ಯಕ್ರಮಗಳ ವಿಡಿಯೋ ರೆಕಾರ್ಡಿಂಗ್ ಆರ್ಡರ್ ಅನ್ನು ಶಶಿಕಲಾ ಅವರಿಗೆ  ನೀಡುತ್ತಾರೆಯ ದಿನಗಳೆದಂತೆ ಜಯಾ ಮತ್ತು ಶಶಿಕಲಾ ಅವರ ನಡುವಿನ ಸ್ನೇಹ ಗಟ್ಟಿಗೊಳ್ಳುತ್ತದೆ. ಪ್ರಮುಖವಾಗಿ 1987ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಂಜಿ ರಾಮಚಂದ್ರನ್ ಅವರು ಸಾವಿಗೀಡಾದ ಬಳಿಕ ಎಐಎಡಿಎಂಕೆ  ಪಕ್ಷ ಹೋಳಾಗತ್ತದೆ. ಆಗ ಜಯಾ ಬೆಂಬಲಕ್ಕೆ ಶಶಿಕಲಾ ನಿಲ್ಲುತ್ತಾರೆ.

1989ರಲ್ಲಿ ಜಯಲಲಿತಾರ ನಿವಾಸ ಪೋಯಸ್ ಗಾರ್ಡನ್ ನಲ್ಲಿ ವಾಸ್ತವ್ಯ ಹೂಡುವ ಜಯಾ ತಮ್ಮ ಮನ್ನಾರ್ ಗುಡಿಯಿಂದ 40 ಕೆಲಸದಾಳುಗಳನ್ನು ಕರೆತರುತ್ತಾರೆ.

1991ರಲ್ಲಿ ಜಯಲಲಿತಾ ಮೊದಲ ಬಾರಿ ಸಿಎಂ ಆಗಿ ನೇಮಕವಾದ ಬಳಿಕ ಜಯಾ ಆಪ್ತೆ ಶಶಿಕಲಾ ಪ್ರಾಬಲ್ಯ ಕೂಡ ಬೆಳೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಶಿಕಲಾ ಸಂಬಂಧಿ ಸುಧಾಕರನ್ ನನ್ನು ಜಯಾ ದತ್ತು ತೆಗೆದುಕೊಳ್ಳುತ್ತಾರೆ.  1995ರಲ್ಲಿ ಜಯಾ ಸುಧಾಕರನ್ ವಿವಾಹವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಾರೆ. ಈ ವಿವಾಹ ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗತ್ತದೆ. ಒಂದು ರೀತಿಯಲ್ಲಿ ಇದೇ ವಿವಾಹ ಜಯಾ  ಮತ್ತು ಶಿಶಕಲಾ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬಂಧನವಾಗಲು ಕಾರಣವಾಗುತ್ತದೆ.  ಡಿಸೆಂಬರ್ 7, 1996ರಲ್ಲಿ ಕಲರ್ ಟಿ.ವಿ. ಹಗರಣದಲ್ಲಿ ಜಯಲಲಿತಾ ಅವರ ಜೊತೆ ಶಶಿಕಲಾ ಅವರನ್ನೂ ಕೂಡ ಬಂಧಿಸಲಾಗತ್ತದೆ.

ಬಳಿಕ 1996ರಲ್ಲಿ ಜಯಲಲಿತಾ, ಶಶಿಕಲಾ ವಿರುದ್ಧ ತಂಸಿ ಭೂ ಅತಿಕ್ರಮಣ ಪ್ರಕರಣ ದಾಖಲಾಗಿ 2000ನೇ ಇಸವಿಯಲ್ಲಿ ಕೆಳ ನ್ಯಾಯಾಲಯಶಿಕ್ಷೆ ಪ್ರಕಟಗೊಳಿಸುತ್ತದೆ.  ಜಯಲಲಿತಾ, ಶಶಿಕಲಾಗೆ 2 ವರ್ಷ ಸಜೆ, 50 ಸಾವಿರ  ದಂಡವನ್ನು ಕೋರ್ಟ್ ವಿಧಿಸುತ್ತದೆ.

2011ರಲ್ಲಿ ಜಯಲಲಿತಾ ಹತ್ಯೆಗೆ ಶಶಿಕಲಾ ಪ್ಲಾನ್ ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತದೆ. ಈ ವಿಚಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗುತ್ತದೆ. ಹೀಗಾಗಿ ಶಶಿಕಲಾ ವಿರುದ್ಧ ಆಕ್ರೋಶಗೊಳ್ಳುವ  ಜಯಲಲಿತಾ, ಶಶಿಕಾಲ ಹಾಗೂ ಅವರ 12 ಮಂದಿ ಆಪ್ತರನ್ನು ತಮ್ಮ ಪೊಯಸ್ ಗಾರ್ಡನ್ ನಿವಾಸದಿಂದ ಹೊರ ಹಾಕುತ್ತಾರೆ. ಅಷ್ಟು ಮಾತ್ರವಲ್ಲದೇ ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಶಶಿಕಲಾ ಮತ್ತು ಅವರ  ಆಪ್ತರನ್ನು ವಜಾ ಮಾಡುತ್ತಾರೆ. ಸುಮಾರು 4 ತಿಂಗಳ ಬಳಿಕ ಶಶಿಕಲಾ ಸಾರ್ವಜನಿಕ ಕ್ಷಮೆ ಕೋರಿದ ಬಳಿಕ ಜಯಾ ಮತ್ತೆ ಶಶಿಕಲಾ ಅವರನ್ನು ಬರ ಮಾಡಿಕೊಳ್ಳುತ್ತಾರೆ.

3 ವರ್ಷಗಳ ಬಳಿಕ 2014 ಸೆಪ್ಟೆಂಬರ್ 27ರಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ಹಾಗೂ ಜಯಲಲಿತಾಗೆ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟ ಮಾಡುತ್ತದೆ.  4 ವರ್ಷ ಸಜೆ, ಶಶಿಕಲಾಗೆ 10 ಕೋಟಿ, ಜಯಲಲಿತಾಗೆ 100  ಕೋಟಿ ದಂಡ ಪಾವತಿಸಲು ವಿಶೇಷ ಕೋರ್ಟ್ ಆದೇಶನೀಡುತ್ತದೆ. ಆದರೆ ಹೈಕೋರ್ಟ್ ನಲ್ಲಿ ಜಯಾ ನಿರಪಾರಾಧಿ ಎಂದು ತೀರ್ಪು ನೀಡಲಾಗುತ್ತದೆ.

ಬಳಿಕ ಡಿಸೆಂಬರ್ 5 ರಂದು ಅನಾರೋಗ್ಯದಿಂದ ಜಯಲಲಿತಾ ಕೊನೆಯುಸಿರೆಳೆಯುತ್ತಾರೆ. ಜಯಾ ಸಾವಿನ ಬಳಿಕ ಅಂದರೆ  2016, ಡಿಸೆಂಬರ್ 29ರಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಆಯ್ಕೆಯಾಗತ್ತಾರೆ.  ಇದಾದ 2 ತಿಂಗಳ ಬಳಿಕ ಅಂದರೆ 2017 ಫೆಬ್ರವರಿ 5ರಂದು ಶಶಿಕಲಾ ತಮಿಳುನಾಡು ಸಿಎಂ ಆಗಿ ಆಯ್ಕೆಯಾಗುತ್ತಾರೆ.

ಆ ಮೂಲಕ ಕಳೆದ 30 ವರ್ಷಗಳಿಂದ ಜಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಿಶಕಲಾ ಅದರ ಆಧಾರದ ಮೇಲೆಯೇ ಸಿಎಂ ಗಾದಿಗೇರಲು ಸಿದ್ಧವಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT