ತಿರುಪತಿ: ದೇಶದ ಅತ್ಯಂತ ಶ್ರೀಮಂತ ದೇವರು ಎಂದೇ ಪ್ರಸಿದ್ದವಾಗಿರುವ ತಿರುಪತಿ ತಿಮ್ಮಪ್ಪ ದೇವಾಲಯಕ್ಕೆ 2013 ಏಪ್ರಿಲ್ 15 ರಂದು ಅನಿವಾಸಿ ಭಾರತೀಯ ವ್ಯಕ್ತಿಯೊಬ್ಬರು 16 ಕೋಟಿ ರು ಹಣ ನೀಡಿದ್ದರು. 4 ವರ್ಷಗಳಿಂದ ಹಣವನ್ನು ಹಾಗೆಯೇ ಇಟ್ಟಿದ್ದ ಟಿಟಿಡಿ ಅಂತಿಮವಾಗಿ ಬಳಸಲು ನಿರ್ಧರಿಸಿದೆ.
ಅಮೆರಿಕಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ಎಂ. ರಾಮಲಿಂಗಾರಾಜು 2013 ಏಪ್ರಿಲ್ 15 ರಂದು ಟಿಟಿಡಿಗೆ 2 ಮಿಲಿಯನ್ ಡಾಲರ್ ಹಣವನ್ನು ಹಸ್ತಾಂತರಿಸಿದ್ದರು. ಇದು ದೇವಾಲಯದ ಇತಿಹಾಸದಲ್ಲಿಯೇ ಕಾಣಿಕೆಯಾಗಿ ಬಂದ ಭಾರೀ ಮೊತ್ತದ ಹಣವಾಗಿದೆ.
ಈ ಹಣದಲ್ಲಿ ಚಿನ್ನದ ಸಹಸ್ರನಾಮ ಹಾರ ತಯಾರಿಸುವುದು ಹಾಗೂ ಉಳಿದ ಹಣವನ್ನು ತಿರುಚ್ಚನೂರ್ ನಲ್ಲಿ ಭಕ್ತಾದಿಗಳಿಗೆ ನಿರ್ಮಿಸತ್ತಿರುವ ಉಚಿತ ಭೋಜನ ಶಾಲೆ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ಟಿಟಿಡಿಗೆ ರಾಮಲಿಂಗಾ ರಾಜು ಮನವಿ ಮಾಡಿದ್ದರು.
ರಾಮಲಿಂಗಾ ರಾಜು ಹಣದ ಡಿಡಿಯನ್ನು ಟಿಟಿಡಿ ಅಧ್ಯಕ್ಷ ತೆ ಬಾಪಿರಾಜು ಅವರಿಗೆ ನೀಡಿದ್ದರು, ನಂತರ ದೇವಾಲಯದ ಕಾರ್ಯಕಾರಿ ಅಧಿಕಾರಿ ಶ್ರೀನಿವಾಸ ರಾಜು 35 ಕೆಜಿ ತೂಕದ ಸಹಸ್ರನಾಮ ಹಾರಕ್ಕಾಗಿ 11 ಕೋಟಿ ರೂ ಬಳಕೆ ಮಾಡಬೇಕೆಂದು ತಿಳಿಸಿದ್ದರು. ಆದರೆ ಸಹಸ್ರ ನಾಮ ಹಾರ ತಯಾರಿಕೆಗೆ ತಾವು ಸೂಚಿಸುವ ಅಕ್ಕಸಾಲಿಗನಿಗೆ ಕೆಲಸ ನೀಡಬೇಕು ಮತ್ತು ಶೇ, 7ರಷ್ಟು ಚಿನ್ನವನ್ನು ತುರುಗು ರೂಪದಲ್ಲಿ ಆತನಿಗೆ ನೀಡಬೇಕು ಎಂಬ ಷರತ್ತು ಹಾಕಿದ್ದರು.
ಆದರೆ ದೇವಾಲಯ ಪ್ರಾಧಿಕಾರದ ನಿಯಮಗಳ ಪ್ರಕಾರ ದಾನಿಗಳಿಗೆ ಚಿನ್ನವನ್ನು ಖರೀದಿಸುವ ಹಾಗೂ ಅವರು ಹೇಳಿದವರ ಕೈಯ್ಯಿಂದ ಕೆಲಸ ಮಾಡಿಸುವ ಅವಕಾಶ ಇಲ್ಲವೆಂದು ಟಿಟಿಡಿ ಹೇಳಿತ್ತು. ಹೀಗಾಗಿ ರಾಮಲಿಂಗ ರಾಜು ನೀಡಿದ್ದ ದಾನದ ಹಣ ಹಾಗೆಯೇ ಉಳಿದಿತ್ತು.
ಈ ಹಣವನ್ನು ಬಳಸದೇ ಟಿಟಿಡಿ ಹಾಗೆಯೇ ಉಳಿಸಿಕೊಂಡಿತ್ತು, ಮತ್ತೆ ಇದರ ಬಗ್ಗೆ ಅಕೌಂಟ್ ನಲ್ಲಿ ದಾಖಲಿಸರಲಿಲ್ಲ, ಆದರೆ ಈಗ ಹಣ ಬಳಕೆಗೆ ಟಿಟಿಡಿ ನಿರ್ಧರಿಸಿದೆ. ಟಿಟಿಡಿ ಅಕ್ಕಸಾಲಿಗನೇ ಸಹಸ್ರನಾಮ ಹಾರ ತಯಾರಿಸಲಿದ್ದಾನೆ, ಇದಕ್ಕೆ ತಗಲು ವೆಚ್ಚ 5ಕೋಟಿ ರು. ತಗುಲಿದೆ ಎಂದು ಟಿಟಿಡಿ ತಿಳಿಸಿದೆ.
ಕಳೆದ ಶನಿವಾರ ಟಿಟಿಡಿ ಬೋರ್ಡ್ ಮೀಟಿಂಗ್ ನಲ್ಲಿ ಕೂಡಲೇ ಸಹಸ್ರನಾಮ ಹಾರ ತಯಾರಿಸುವುದು ಹಾಗೂ ಉಳಿದ 11 ಕೋಟಿ ಹಣವನ್ನು ಹರ್ಯಾಣದ ಕುರುಕ್ಷೇತ್ರದಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲು ಟಿಟಿಡಿ ನಿರ್ಧರಿಸಿದೆ.
2013 ರಲ್ಲಿ ಬಂದ ಹಣವನ್ನು ಏಕೆ ಬಳಸಿಕೊಳ್ಳಲಿಲ್ಲ ಎಂಬುದರ ಬಗ್ಗೆ ವರದಿ ನೀಡುವಂತ ಟಿಟಿಡಿ ಕಾರ್ಯಕಾರಿ ಅಧಿಕಾರ ಡಿ. ಶಿವ ರಾವ್ ಕೇಳಿದ್ದಾರೆ. ಜೊತೆಗೆ ಸಹಸ್ರನಾಮ ಹಾರವನ್ನು ಏಕೆ ತಯಾರಿಸಲಿಲ್ಲ ಎಂಬ ಬಗ್ಗೆ ಪ್ರಶ್ನಿಸಿರುವ ಅವರು ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.
ಇದರ ಜೊತೆಗೆ ದಾನಿಗಳು ನೀಡಿರುವ ಇಂಥ ಬಳಕೆಯಾಗದೇ ಉಳಿದರುವ ಹಣವಿದ್ದರೇ ಅಂತಹ ಹಣದ ಬಗ್ಗೆ ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಟಿಟಿಡಿ ಬೋರ್ಡ್ ಆದೇಶಿಸಿದೆ, ಮೂಲಗಳ ಪ್ರಕಾರ ಭಕ್ತರು ನೀಡಿರುವ 10 ಕೋಟಿ ಹಣ ಹಾಗೂ 72 ಕೆಜಿ ಚಿನ್ನ ದೇವಾಲಯದಲ್ಲಿ ಬಳಕೆಯಾಗದೇ ಹಾಗೆಯೇ ಉಳಿದಿದೆ ಎನ್ನಲಾಗಿದೆ.