ನವದೆಹಲಿ: ಉಗ್ರರ ವಿರುದ್ಧ ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶನಿವಾರ ಬೆಂಬಲಕ್ಕೆ ಬಂದಿದ್ದಾರೆ.
ಬಿಪಿನ್ ರಾವತ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ಅವರು, ಭಯೋತ್ಪಾದನಾ ನಿಗ್ರಹ ವಿಚಾರದಲ್ಲಿ ಭಾರತೀಯ ಸೇನಾ ಪಡೆದೆ ನಮ್ಮ ಸರ್ಕಾರ ಮುಕ್ತ ಕೈಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಪ್ರತೀಯೊಬ್ಬರೂ ಒಂದಲ್ಲ ಒಂದು ಕಡೆ ಬೆಂಬಲವನ್ನು ವ್ಯಕ್ತಪಡಿಸುತ್ತಾರೆ. ಒಬ್ಬ ಅಧಿಕಾರಿಯಾಗಿ ಸೇನಾ ಮುಖ್ಯಸ್ಥರಿಗೆ ಅವರದ್ದೇ ಆದ ಜವಾಬ್ದಾರಿಗಳಿರುತ್ತವೆ. ನಾಯಕತ್ವವಹಿಸುವವರು ಆಯಾ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ಉಗ್ರರನ್ನು ರಕ್ಷಣೆ ಮಾಡುವ ಜನರ ಕುರಿತಂತೆ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ. ಎಲ್ಲಾ ಜನಸಾಮಾನ್ಯರಿಗೂ ಈ ಹೇಳಿಕೆ ಅನ್ವಯಿಸುತ್ತದೆ ಎಂದು ಪರಿಗಣಿಸಬಾರದು. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಸೇನೆ, ಪೊಲೀಸರು ಹಾಗೂ ಸಿಆರ್'ಪಿಎಫ್ ಯೋಧರಿಗೆ ಸರ್ಕಾರ ಸಂಪೂರ್ಣ ಸ್ವತಂತ್ರವನ್ನು ನೀಡಿದೆ ಎಂದು ಹೇಳಿದ್ದಾರೆ.
ತಪ್ಪು ದಾರಿಗೆ ಹೋಗುತ್ತಿರುವ ಯುವರನ್ನು ಉತ್ತಮ ಹಾದಿಗೆ ತರಲು ಸೇನಾ ಮುಖ್ಯಸ್ಥರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ. ಪ್ರತೀಯೊಬ್ಬರಿಗೂ ಈ ಹೇಳಿಕೆ ಅನ್ವಯಿಸುತ್ತದೆ ಪರಿಗಣಿಸಬಾರದು. ಪರಿಸ್ಥಿತಿ ಅವಲೋಗಿಸಿ ಮುಖ್ಯಸ್ಥರು ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲೇಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಕಾರ್ಯಾಚರಣೆ ವೇಳೆ ಸ್ಥಳೀಯರು ವಿರೋಧ ವ್ಯಕ್ತಪಡಿಸುವುದರಿಂದ ಭದ್ರತಾ ಸಿಬ್ಬಂದಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯರು ಭಯೋತ್ಪಾದಕರಿಗೆ ತಪ್ಪಿಸಿಕೊಳ್ಳಲು ನೆರವು ಮಾಡಿಕೊಡುವಂತಹ ಘಟನೆಗಳೂ ನಡೆಯುತ್ತಿವೆ. ಸ್ಥಳೀಯ ಯುವಕರು ಪಾಕಿಸ್ತಾನ, ಐಎಸ್ಐಎಸ್ ಧ್ವಜಗಳನ್ನು ಹಿಡಿದು ಸೇನಾ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಮುಲಾಜಿಲ್ಲದೇ ಅವರನ್ನು ರಾಷ್ಟ್ರದ್ರೋಹಿ, ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂದು ಕಠಿಣ ಸಂದೇಶವನ್ನು ರವಾನಿಸಿದ್ದರು.
ಈ ಹೇಳಿಕೆ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದವು. ಅಲ್ಲದೆ, ಕಾಶ್ಮೀರ ಪ್ರತ್ಯೇಕತಾವಾದಿಗಳು ಕೂಡ ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಮುಖ್ಯಸ್ಥ ಯಾಸಿನ್ ಮಲಿಕ್ ಮಾತನಾಡಿ, ಸೇನಾ ಮುಖ್ಯಸ್ಥ ಹೇಳಿಕೆ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ. ಈ ರೀತಿಯ ಹೇಳಿಕೆ ಇಡೀ ಕಾಶ್ಮೀರಕ್ಕೆ ನೇರ ಬೆದರಿಕೆಯಾಗಿದೆ ಎಂದು ಹೇಳಿದ್ದರು.