ಶ್ರೀನಗರ: 1990 ರಲ್ಲಿ ಭಯೋತ್ಪಾದಕರ ದಾಳಿಗೆ ಸಿಲುಕಿ ಪಂಡಿತರು ಕಾಶ್ಮೀರ ತೊರೆದಿದ್ದರಿಂದ ಇಂದು ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಎಸ್ ಕೆಐಸಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬಾ ಮುಫ್ತಿ, ಪಂಡಿತರು ಕಾಶ್ಮೀರ ಕಣಿವೆ ತೊರೆದಿರುವ ಪರಿಣಾಮದಿಂದ ಇಂದು ಕಾಶ್ಮೀರ ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ, ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಶಾಂತಿ ಅಗತ್ಯವಿದೆ ಇದನ್ನು ಕಾಶ್ಮೀರ ಕಣಿವೆಯ ಜನತೆ ಅರ್ಥಮಾಡಿಕೊಳ್ಳಬೇಕೆಂದು ಹೇಳಿದ್ದಾರೆ.
ಉಗ್ರರ ದಾಳಿಯಿಂದ ಕಾಶ್ಮೀರ ಪಂಡಿತರು ಕಾಶ್ಮೀರವನ್ನು ತೊರೆದರು, ಅದರ ಪರಿಣಾಮವೆಂಬಂತೆ ಇಂದಿಗೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಶ್ರೇಷ್ಠ ಗುರುಗಳಾಗಿದ್ದ ಕಾಶ್ಮೀರಿ ಪಂಡಿತರು ತಮ್ಮ ಕಲಿಕೆಯನ್ನು ಜಮ್ಮುವಿನ ಜನತೆಯಲ್ಲಿ ತುಂಬಿದ್ದರು, ಆದರೆ ಕಾಶ್ಮೀರ ಕಣಿವೆ ಮಾತ್ರ ಅಂತಹ ಶ್ರೇಷ್ಠ ವ್ಯಕ್ತಿತ್ವವುಳ್ಳ ಗುರುಗಳನ್ನು ಕಳೆದುಕೊಂಡು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ ಎಂದು ಮೆಹಬೂಬಾ ಮುಫ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ನಾನೂ ಸಹ ಪಂಡಿತ ಗುರುಗಳಿಂದಲೇ ಕಲಿತವಳು, ಆದ್ದರಿಂದ ಹೇಳುತ್ತಿದ್ದೇನೆ, ಪಂಡಿತರು ನಿಜವಾಗಿಯೂ ಶ್ರೇಷ್ಠ ಗುರುಗಳು. ಕಾಶ್ಮೀರಕ್ಕೆ ಒಳ್ಳೆಯ ಹೆಸರು ತಂದುಕೊಟ್ಟಿರುವ ಅನೇಕರು ಪ್ರಸಿದ್ಧಿ ಗಳಿಸುವುದಕ್ಕೆ ಕಾಶ್ಮೀರಿ ಪಂಡಿತರು ಅಪಾರ ಕೊಡುಗೆ ನೀಡಿದ್ದಾರೆ. ಕಾಶ್ಮೀರವನ್ನು ಮತ್ತೆ ಗತವೈಭಕ್ಕೆ ಮರಳಿ ತರುವುದು ಸವಾಲಿನ ಸಂಗತಿ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ.