ಮಧುರೈ: ಟಿವಿ ಪತ್ರಕರ್ತನಿಗೆ ಹಾಡಹಗಲೇ ರಸ್ತೆ ಮದ್ಯದಲ್ಲಿ ಗಾಂಜಾ ತಂಡವೊಂದು ಹೊಟ್ಟೆಗೆ ಇರಿದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಪಾಲಿಮಾರ್ ಟಿವಿ ಚಾನೆಲ್ ವರದಿಗಾರ ಆರ್ ,ಚಂದನ್ ಎಂಬುವರಿಗೆ ಮಧುರೈನ ತಮ್ಮ ಮನೆಯ ಪಕ್ಕದ ಅಂಗಡಿವೊಂದರಲ್ಲಿ ಸಾಮಾನು ಖರೀದಿಸುವ ವೇಳೆ ಬಂದ ತಂಡವೊಂದು ಹೊಟ್ಟೆಗೆ ಇರಿಯಲಾಗಿದೆ. ಮಧುರೈನ ತಬಲ್ ಥಂಢಿ ನಗರ್ ನಲ್ಲಿ ತಮ್ಮ ಇಬ್ಬರು ಮಕ್ಕಳು ಹಾಗೂ ಪತ್ನಿ ಜೊತೆ ವಾಸವಿದ್ದಾರೆ.
ಬೆಳಗ್ಗೆ 7.30 ರ ಸುಮಾರಿಗೆ ತಮ್ಮ ಮನೆಯ ಪಕ್ಕದ ಅಂಗಡಿಯಲ್ಲಿ ಹಾಲು ಖರೀದಿಸಿ ಬರುತ್ತಿದ್ದಾಗ ದಾರಿಯಲ್ಲಿ ಚಂದ್ರನ್ ಅವರನ್ನು ಸುತ್ತುವರಿದ ತಂಡವೊಂದು, ಚಾಕುವಿನಿಂದ ಇರಿದು ಪರಾರಿಯಾಗಿದೆ, ಈ ಹಿಂದೆ ಗಾಂಜಾ ಗ್ಯಾಂಗ್ ವೊಂದರ ವಿರುದ್ಧ ಚಂದ್ರನ್ ದೂರು ದಾಖಲಿಸಿದ್ದರು. ಅದರ ದ್ವೇಷಕ್ಕಾಗಿ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೂಡಲೇ ಚಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಚಂದ್ರನ್ ಅವರ 18 ವರ್ಷದ ಮಗನ ಮೇಲೂ ಇದೇ ರೀತಿಯ ದಾಳಿ ನಡೆದಿತ್ತು. ಈ ಸಂಬಂಧ ತಲ್ಲಕುಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.