ಕೊಚ್ಚಿ: ಮಾಲಿವುಡ್ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಒಂದು ವಾರದಿಂದ ಹಲವಾರು ಅಂತೆಕಂತೆ ಸುದ್ದಿಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಆ ದಿನ ನಿಜವಾಗಿ ಏನು ನಡೆಯಿತು ಎಂಬ ವಿಶೇಷ ಮಾಹಿತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನಟಿ ದಾಖಲಿಸಿದ ಎಫ್ಐಆರ್ ನಿಂದ ತಿಳಿದುಬಂದಿದೆ. ಪೊಲೀಸರಿಗೆ ನೀಡಿದ ಎಫ್ಐಆರ್ ದೂರಿನಲ್ಲಿ ನಟಿ ಆ ದಿನ ನಡೆದ ಘಟನೆಯ ಸಂಪೂರ್ಣ ವಿವರ ತಿಳಿಸಿದ್ದಾರೆ.
ಏಳು ಮಂದಿಯ ಗುಂಪು ನಟಿ ಚಲಿಸುತ್ತಿರುವ ಕಾರಿನಲ್ಲಿ ಕಿರುಕುಳ ನೀಡಿ ಘಟನೆಯನ್ನು ಮೂರನೇ ವ್ಯಕ್ತಿಯ ಆಜ್ಞೆಯಂತೆ ಮೊಬೈಲ್ ನಲ್ಲಿ ದಾಖಲಿಸಿಕೊಂಡಿದ್ದಾರೆ. ಸುಮಾರು ಎರಡೂವರೆ ಗಂಟೆ ಕಾಲ ಆರೋಪಿಗಳು ನಟಿಯನ್ನು ಕಾರಿನಲ್ಲಿ ಸುತ್ತಾಡಿಸಿ ಹಿಂಸೆ ನೀಡಿ ಕೇರಳದ ಕಕ್ಕನಾಡ್ ಸಮೀಪ ಪಜಮುಗಲ್ ಎಂಬಲ್ಲಿ ಆಕೆಯ ಕಾರಿನಿಂದ ಹೊರಟು ಎಸೆದು ಹೊರಟು ಹೋಗಿದ್ದಾರೆ.
ಘಟನೆಯ ಸರಣಿ ಹೀಗೆ ತೆರೆದುಕೊಳ್ಳುತ್ತದೆ: ಅಂದು ನಟಿ ಕೇರಳದ ತ್ರಿಶೂರು ಸಮೀಪ ಪಟ್ಟುರೈಕ್ಕಲ್ ಎಂಬಲ್ಲಿ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿ ಸಾಯಂಕಾಲ 7 ಗಂಟೆ ಸುಮಾರಿಗೆ ಲಾಲ್ ಕ್ರಿಯೇಷನ್ ಸಿನಿಮಾ ತಂಡದ ಎಸ್ ಯುವಿ ಕಾರಿನಲ್ಲಿ ಕೊಚ್ಚಿಯ ಪನಂಪಿಲ್ಲಿ ನಗರದಲ್ಲಿರುವ ಸ್ನೇಹಿತೆ ಮನೆಗೆ ಪ್ರಯಾಣ ಬೆಳೆಸಿದ್ದರು.
ಪ್ರಯಾಣದ ಮಧ್ಯದಲ್ಲಿ ಕಾರಿನ ಚಾಲಕ ಮಾರ್ಟಿನ್ ಯಾರಿಗೋ ಮೊಬೈಲ್ ನಲ್ಲಿ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದ. ಮಾರ್ಟಿನ್ ನೀಡಿದ ಮಾಹಿತಿ ಮೇರೆಗೆ ಇತರರ ಗುಂಪು ಕಾರನ್ನು ಕ್ಯಾಟರಿಂಗ್ ಪೂರೈಸುವ ವ್ಯಾನ್ ನಲ್ಲಿ ಹಿಂಬಾಲಿಸುತ್ತಾ ಹೋಗಿ ರಾತ್ರಿ 8.30ರ ಸುಮಾರಿಗೆ ಆಕೆ ಪ್ರಯಾಣಿಸುತ್ತಿದ್ದ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಯುತ್ತಾರೆ. ಈ ಘಟನೆ ನಡೆದಿದ್ದು ನೆಡುಂಬಸ್ಸೆರಿ ವಿಮಾನ ನಿಲ್ದಾಣ ಜಂಕ್ಷನ್ ಹತ್ತಿರ.
ಕಾರು ನಿಂತಾಗ ವ್ಯಾನಿನಲ್ಲಿದ್ದ ಎರಡನೇ ಮತ್ತು ಆರೋಪಿಗಳು ಕಾರಿನೊಳಗೆ ನುಗ್ಗಿ ಬಲವಂತವಾಗಿ ನಟಿಯ ಬಾಯಿಯನ್ನು ತಮ್ಮ ಅಂಗೈಯಿಂದ ಮುಚ್ಚಿದರು. ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ ಆರೋಪಿಗಳು ನಟಿಯ ಬಳಿಯಿಂದ ಮೊಬೈಲ್ ಕಸಿದುಕೊಂಡರು.
ನಂತರ ಎಲ್ಲರೂ ಕಾರಿನಲ್ಲಿ ಪ್ರಯಾಣ ಮುಂದುವರಿಸುತ್ತಾರೆ.ಒಬ್ಬ ಆರೋಪಿ ಹಿಂದಿನಿಂದ ಕ್ಯಾಟರಿಂಗ್ ವ್ಯಾನ್ ಚಲಾಯಿಸಿಕೊಂಡು ಬರುತ್ತಾನೆ. ಪ್ರಯಾಣದ ಸಂದರ್ಭದಲ್ಲಿ ಮೂರನೇ ಆರೋಪಿ(ಎಫ್ಐಆರ್ ನಲ್ಲಿ ಹೆಸರು ದಾಖಲಿಸಿಲ್ಲ) ಕಲಮಸ್ಸೆರಿ ಎಂಬಲ್ಲಿ ಕಾರಿನಿಂದ ಇಳಿಯುತ್ತಾನೆ. ನಾಲ್ಕನೇ ಆರೋಪಿ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಅಲ್ಲಿ ಕಾರಿಗೆ ಹತ್ತಿಕೊಳ್ಳುತ್ತಾನೆ. ಪಲರಿವಟ್ಟೊಮ್ ನಲ್ಲಿ ಕಾರಿನಿಂದ ಇಳಿಯುವ ಮುನ್ನ ಇತರರೊಡನೆ ಸೇರಿ ನಟಿಗೆ ಸಾಕಷ್ಟು ಕಿರುಕುಳ ನೀಡುತ್ತಾನೆ.
ಪಲರಿವಟ್ಟೊಮ್ ನಲ್ಲಿ 5ನೇ ಮತ್ತು 6ನೇ ಆರೋಪಿಗಳು ಅಪಹರಣ ತಂಡವನ್ನು ಸೇರಿಕೊಳ್ಳುತ್ತಾರೆ. ಅಲ್ಲಿ ದಾರಿ ಬದಲಾಯಿಸಿ ಗ್ರಿಲ್ ಗೇಟು ಇರುವ ಮನೆಯೊಂದನ್ನು ಪ್ರವೇಶಿಸುತ್ತಾರೆ. ಅಲ್ಲಿ ಇಡೀ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ತಂಡವನ್ನು ಸೇರಿಕೊಳ್ಳುತ್ತಾನೆ. ಮುಖಕ್ಕೆ ಟವೆಲ್ ನ್ನು ಸುತ್ತಿಕೊಂಡು ಚಾಲಕರ ಸೀಟಿನಲ್ಲಿ ಕೂರುತ್ತಾನೆ.ಅಲ್ಲಿಯವರೆಗೆ ಕಾರು ಚಲಾಯಿಸಿಕೊಂಡು ಬಂದಿದ್ದ ಮಾರ್ಟಿನ್ ಕ್ಯಾಟರಿಂಗ್ ವ್ಯಾನ್ ಗೆ ಹೋಗುತ್ತಾನೆ. ಕಕ್ಕನಾಡುಗೆ ಕಾರು ತೆಗೆದುಕೊಂಡು ಹೋದ ಪಲ್ಸರ್ ಸುನಿ ಅಲ್ಲಿ ನಟಿಗೆ ಕಿರುಕುಳ ನೀಡುತ್ತಾನೆ.
ಬೇರೆ ಅನಾಮಧೇಯ ವ್ಯಕ್ತಿಗಳ ಆಜ್ಞೆಯಂತೆ ಕೃತ್ಯವೆಸಗುತ್ತಿರುವುದಾಗಿ ಹೇಳಿದ ಪಲ್ಸರ್ ಸುನಿ, ನಟಿ ಹೊಂದಾಣಿಕೆ ಭಾವ, ಭಂಗಿಯಲ್ಲಿ ಕುಳಿತ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಚಿತ್ರಿಸಿ ಕಳುಹಿಸಿಕೊಡಲು ತಮಗೆ ಹೇಳಿದ್ದಾರೆ, ಅದಕ್ಕೆ ಸಹಕರಿಸುವಂತೆ ನಟಿಗೆ ಹೇಳಿದ್ದಾನೆ. ಅದಕ್ಕೆ ಒಪ್ಪದ ನಟಿ ವಿರೋಧಿಸಿದಾಗ ಕಾರಿನಿಂದ ಹೊರಗೆ ಎಸೆದು ಹೋಗಿದ್ದಾನೆ. ಅಲ್ಲಿಂದ ಹೇಗೊ ಸಾವರಿಸಿಕೊಂಡು ಎದ್ದ ನಟಿ ಮಲಯಾಳಂ ನಿರ್ದೇಶಕ ಲಾಲ್ ಅವರನ್ನು ಸಂಪರ್ಕಿಸಿ ಅವರ ಮನೆಗೆ ತೆರಳುತ್ತಾರೆ. ಅವರು ಘಟನೆಯನ್ನು ಪೊಲೀಸರಿಗೆ ತಿಳಿಸಿದರು.