ನವದೆಹಲಿ: ರಾಜಧಾನಿ ದೆಹಲಿಯ ರಾಮಜಾಸ್ ಕಾಲೇಜಿನಲ್ಲಿ ಎಬಿವಿಪಿ ಹಾಗೂ ಎಐಎಸ್ಎ ನಡುವಿನ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ-ಎಂ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಪ್ರಾಯೋಜಿತ ಅಸಹಿಷ್ಣುತೆ ಎಂದು ಆರೋಪಿಸಿದೆ.
ಫೆ.22 ರಂದು ಎಬಿವಿಪಿ ಹಾಗೂ ಎಐಎಸ್ಎ ವಿದ್ಯಾರ್ಥಿಗಳ ನಡುವೆ ರಾಮಜಾಸ್ ಕಾಲೇಜಿನಲ್ಲಿ ನಡೆದ ಘರ್ಷಣೆಯಲ್ಲಿ 12 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ರಾಷ್ಟ್ರದ್ರೋಹದ ಆರೋಪದಡಿ ಕಳೆದ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಉಮರ್ ಖಾಲೀದ್ ಎಂಬ ಜೆಎನ್ ಯು ವಿದ್ಯಾರ್ಥಿಯ ಭಾಷಣವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ವೇಳೆಯಲ್ಲಿ ಘರ್ಷಣೆ ಉಂಟಾಗಿತ್ತು.
ರಾಮಜಾಸ್ ಕಾಲೇಜಿನಲ್ಲಿ ನಡೆದಿರುವ ಘರ್ಷಣೆಯನ್ನು ಸಿಪಿಐ-ಎಂ ಖಂಡಿಸುತ್ತದೆ. ಇದು ಸರ್ಕಾರಿ ಪ್ರಾಯೋಜಿತ ಅಸಹಿಷ್ಣುತೆಗೆ ಮತ್ತೊಂದು ಅತ್ಯುತ್ತಮ ಉದಾಹರಣೆ ಎಂದು ಸಿಪಿಐ-ಎಂ ಆರೋಪಿಸಿದೆ. ದೆಹಲಿ ಪೊಲೀಸಲು ಘರ್ಷಣೆ ನಡೆಯಲು ಅವಕಾಶ ನೀಡಿ ನಾಚಿಕೆಗೇಡಿನ ಕ್ರಮ ಅನುಸರಿಸಿದ್ದಾರೆ. ಪೊಲೀಸ್ ಠಾಣೆಗೆ ಹೋದ ಪ್ರಾಧ್ಯಾಪಕರ ಮೇಲೂ ಸಹ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಸಿಪಿಐ-ಎಂ ಪಕ್ಷ ಅಸಮಾಧಾನ ವ್ಯಕ್ತಪಡಿಸಿದೆ.