ದೇಶ

ವಿಧಾನಸಭಾ ಚುನಾವಣೆ 2017: ಉ.ಪ್ರದೇಶದಲ್ಲಿ 4ನೇ ಹಂತದ ಮತದಾನ ಆರಂಭ

Manjula VN

ಲಖನೌ: ಪಂಚರಾಜ್ಯ ವಿಧಾನಸಭಾ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ 4ನೇ ಹಂತದ ಮತದಾನ ಪ್ರಕ್ರಿಯೆ ಗುರುವಾರ ಆರಂಭಗೊಂಡಿದೆ.

12 ಜಿಲ್ಲೆಗಳ 53 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭವಾಗಿದೆ. ಕಣದಲ್ಲಿ 680 ಅಭ್ಯರ್ಥಿಗಳಿದ್ದು 3 ಲಕ್ಷಕ್ಕೂ ಅಧಿಕ ಯುವ ಮತದಾರರು ಇಂದು ತಮ್ಮ ಚೊಚ್ಚಲ ಮತದಾನವನ್ನು ಮಾಡಲಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ಸಂಜೆ 5 ಗಂಟೆಗೆ ಮತದಾನ ಮುಕ್ತಾಯಗೊಳ್ಳಲಿದೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಈ ಚುನಾವಣೆ ಬಿಜೆಪಿಗೆ ಬಹುಮುಖ್ಯ ಚುನಾವಣೆಯಾಗಿದ್ದು, ನೋಟು ನಿಷೇಧದ ಬಳಿಕ ಮೊದಲು ನಡೆಯುತ್ತಿರುವ ಚುನಾವಣೆ ಇದಾಗಿದೆ. ಬಿಜೆಪಿ ಮಣಿಸಲು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಪಣತೊಟ್ಟಿದ್ದು, ಮೈತ್ರಿ ಮಾಡಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸಗಳನ್ನು ವ್ಯಕ್ತಪಡಿಸುತ್ತಿವೆ. ಇನ್ನು ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧೆಗಿಳಿದಿದೆ.

ಇಂದು ನಡೆಯುತ್ತಿರುವ 4ನೇ ಹಂತದ ಚುನಾವಣೆಯಲ್ಲಿ 1 ಕೋಟಿ ಪುರುಷರು, 84 ಲಕ್ಷ ಮಹಿಳೆಯರು ಹಾಗೂ 1,034 ತೃತೀಯ ಲಿಂಗಿಗಳು ಮತದಾನ ಮಾಡಲಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮತ ಕ್ಷೇತ್ರಗಳ ಬಳಿ ಬಿಗಿ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT