ದೇಶ

ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಕೊಹ್ಲಿಗೆ 47 ಲಕ್ಷ ರು. ಪಾವತಿ: ಬಿಜೆಪಿ ನಾಯಕ

Lingaraj Badiger
ಡೆಹ್ರಾಡೂನ್: ಉತ್ತರಾಖಂಡ್ ನ ಹರೀಶ್ ರಾವತ್ ಸರ್ಕಾರ ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಯಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರಿಗೆ 47.19 ಲಕ್ಷ ರುಪಾಯಿ ಪಾವತಿ ಮಾಡಿದೆ ಎಂದು ಬಿಜೆಪಿ ನಾಯಕ ಹಾಗೂ ಆರ್ ಟಿಐ ಕಾರ್ಯಕರ್ತರೊಬ್ಬರು ಶನಿವಾರ ಆರೋಪಿಸಿದ್ದಾರೆ. 
2015 ಜೂನ್ ತಿಂಗಳಲ್ಲಿ  ಉತ್ತರಾಖಂಡ್ ಪ್ರವಾಸೋದ್ಯಮ ಇಲಾಖೆಗಾಗಿ ಕೊಹ್ಲಿ 60 ಸೆಕೆಂಡ್ ಅವಧಿಯ ವಿಡಿಯೊವೊಂದರಲ್ಲಿ ನಟಿಸಿದ್ದರು. ಕೊಹ್ಲಿಯವರ ಈ ನಟನೆಗಾಗಿ ರಾವತ್ ಸರ್ಕಾರ 2013ರಲ್ಲಿ ಕೇದಾರನಾಥ್ ಪ್ರವಾಹ ಸಂತ್ರಸ್ತರ ಪುನರ್ವಸತಿ ನಿಧಿಯಿಂದ ಗಾಯಕ ಕೈಲಾಶ್ ಖೇರ್ ಅವರ ಕೈಲಾಶ್ ಎಂಟರ್ ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮೂಲಕ ಹಣ ಪಾವತಿ ಮಾಡಿದೆ ಎಂದು ಆರ್ ಟಿ ಐ ಕಾರ್ಯಕರ್ತ, ಬಿಜೆಪಿ ನಾಯಕ ಅಜೇಂದ್ರ ಅಜಯ್ ಅವರು ಆರೋಪಿಸಿದ್ದಾರೆ. ಆದರೆ ಈ ರೀತಿಯ ಹಣ ವಹಿವಾಟು ನಡೆದಿಲ್ಲ ಎಂದು ಕೊಹ್ಲಿ  ಅವರ ಏಜೆಂಟ್ ಬಂಟಿ ಸಜ್‍ದೇ ಹೇಳಿದ್ದಾರೆ .
2013ರಲ್ಲಿ ಕೊಹ್ಲಿ ಉತ್ತರಾಖಂಡ್‍ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಮಾಧ್ಯಮ ಸಲಹೆಗಾರ ಸುರೇಂದ್ರ ಕುಮಾರ್ ಅವರು, ಬಿಜೆಪಿ ಆರೋಪಗಳೆಲ್ಲವೂ ಆಧಾರರಹಿತವಾಗಿದೆ. ಕೇದಾರನಾಥ ಪ್ರವಾಹ ಸಂತ್ರಸ್ತರ ಪುನರ್ವಸತಿಗಾಗಿ ಕಾಂಗ್ರೆಸ್ ಸರ್ಕಾರ ಯಾವ ರೀತಿ ಮುತುವರ್ಜಿ ವಹಿಸಿದೆ ಎಂಬುದು ಜನರಿಗೆ ತಿಳಿದಿದೆ. ಬಿಜೆಪಿಗೆ ಈ ಚುನಾವಣೆಯಲ್ಲಿ ಸೋಲು ಖಚಿತ. ನಿರಾಸೆಯಿಂದಾಗಿಯೇ ಈ ರೀತಿಯ ಆರೋಪ ಮಾಡುತ್ತಿದೆ ಎಂದಿದ್ದಾರೆ.
SCROLL FOR NEXT