ಇಂಫಾಲ: ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡುವ ಸಲುವಾಗಿ ಪ್ರಧಾನಿ ಮೋದಿ ಇಂಫಾಲಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ವ್ಯಾಪಕ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಧಾನಿ ಮೋದಿ ಇಂಫಾಲ ಭೇಟಿಗೂ ಮುನ್ನ ನಿನ್ನೆ ಸ್ಥಳೀಯ ಬಿಜೆಪಿ ಮುಖಂಡರ ಮನೆ ಆವರಣದಲ್ಲಿ ಬಾಂಬ್ ಗಳು ಪತ್ತೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಭೇಟಿ ನೀಡುವ ಮುನ್ನಾ ದಿನ ಭದ್ರತಾ ಪಡೆಗಳು ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಹ್ಯಾಂಡ್ ಗ್ರನೇಡ್ ಮತ್ತು ಬಾಂಬ್ಗಳನ್ನು ವಶಪಡಿಸಿಕೊಂಡಿದ್ದವು. ಹೀಗಾಗಿ ಇಂದು ವ್ಯಾಪಕ ಭದ್ರತೆ ಒದಗಿಸಲಾಗಿದ್ದು, ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತಡೆಯಾಗದಂತೆ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಚುನಾವಣಾ ರ್ಯಾಲಿ ಭಾಷಣ ಮಾಡಲಿರುವ ಇಂಫಾಲ ಪಶ್ಚಿಮ ಜಿಲ್ಲೆಯ ಲಂಗ್ಜಿಂಗ್ ಅಚೌಬಾ ಕ್ರೀಡಾಂಗಣದ ಸುತ್ತುಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಪರೀಶೀಲನೆ ನಡೆಸಿದ್ದಾರೆ. ಪ್ರಮುಖ ಉಗ್ರಗಾಮಿ ಸಂಘಟನೆಗಳು ಶನಿವಾರ ಇಂಫಾಲ ಬಂದ್ ಗೆ ಕರೆ ನೀಡಿದ್ದು, ಪ್ರಧಾನಿ ಭೇಟಿಯನ್ನು ವಿರೋಧಿಸಿ 6 ಸಂಘಟನೆಗಳು ಶನಿವಾರ ಮಣಿಪುರ ಬಂದ್ಗೆ ಕರೆ ನೀಡಿವೆ. ಇದು ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವಂತೆ ಮಾಡಿದ್ದು, ಪ್ರಧಾನಿ ಮೋದಿ ಭಾಷಣ ಮುಗಿಯುವವರೆಗೂ ಕರ್ಫ್ಯೂ ಹೇರಲಾಗುತ್ತದೆ ಎಂದು ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದು, ಅನೇಕ ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದೆ. ಶುಕ್ರವಾರ ಬಿಜೆಪಿ ಅಭ್ಯರ್ಥಿಯ ಮನೆಯ ಗೇಟ್ ಬಳಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದ್ದರೆ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯ ಮುಂದೆ ಬಾಂಬ್ ಪತ್ತೆಯಾಗಿತ್ತು.
ಮಣಿಪುರದಲ್ಲಿ 68 ವಿಧಾನಸಭೆ ಕ್ಷೇತ್ರಗಳಿಗೆ ಮಾರ್ಚ್ 4 ಮತ್ತು ಮಾರ್ಚ್ 8 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.