ನಾಗ್ ಪುರ: ಅಸ್ಸಾಂ ನ ಕಾಝಿರಂಗ ರಾಷ್ಟ್ರೀಯ ಉದ್ಯಾನ (ಹುಲಿ ಸಂರಕ್ಷಿತ ಅಭಯಾರಣ್ಯ)ದಲ್ಲಿನ ಕಠಿಣ ರಕ್ಷಣಾ ಕ್ರಮಗಳನ್ನು ಪ್ರಶ್ನಿಸಿದ್ದ ಬಿಬಿಸಿ ಚಾನಲ್ ಗೆ ಅಭಯಾರಣ್ಯ ಪ್ರವೇಶಿಸದಂತೆ 5 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದೆ.
ಒನ್ ವರ್ಲ್ಡ್: ಕಿಲ್ಲಿಂಗ್ ಫಾರ್ ಕನ್ಸರ್ವೇಷನ್ (One World: Killing for Conservation) ಶೀರ್ಷಿಕೆಯಡಿ ಬಿಬಿಸಿಯ ದಕ್ಷಿಣ ಏಷ್ಯಾದ ಪ್ರತಿನಿಧಿ ಜಸ್ಟಿನ್ ರೋಲಟ್ ವರದಿ ಪ್ರಕಟಿಸಿದ್ದರು. ಘೇಂಡಾ ಮೃಗಗಳಿಗೆ ಅಪಾಯಕಾರಿ ಎಂದು ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಕಾಝಿರಂಗ ರಾಷ್ಟ್ರೀಯ ಉದ್ಯಾನದಲ್ಲಿರುವ ಅರಣ್ಯಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಹುಲಿ, ಘೇಂಡಾ ಮೃಗಗಳ ಸಂರಕ್ಷಣೆಗಾಗಿ ಕೈಗೊಂಡಿರುವ ಈ ಕಠಿಣ ನಿರ್ಧಾರವನ್ನು ಬಿಬಿಸಿ ತನ್ನ ವರದಿಯಲ್ಲಿ ಪ್ರಶ್ನಿಸಿತ್ತು. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಫೆ.15 ರಂದು ವರದಿ ಪ್ರಕಟಿಸಿತ್ತು.
ಬಿಬಿಸಿ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಹುಲಿ ಸಂರಕ್ಷಿತ ಅಭಯಾರಣ್ಯ ಪ್ರಾಧಿಕಾರ (ಎನ್ ಟಿಸಿಎ) ಅಭಯಾರಣ್ಯ ಪ್ರವೇಶಿಸದಂತೆ ಬಿಬಿಸಿಗೆ 5 ವರ್ಷಗಳ ಕಾಲ ನಿಷೇಧ ಹೇರಿದೆ. ನಿಷೇಧ ವಿಧಿಸಿರುವುದರ ಬಗ್ಗೆ ಅಭಯಾರಣ್ಯದ ವಾರ್ಡನ್ ಗಳಿಗೂ ಮಾಹಿತಿ ನೀಡಲಾಗಿದೆ.