ನವದೆಹಲಿ: ಹೊಸವರ್ಷ ಹಿನ್ನಲೆಯಲ್ಲಿ ಸಂಭ್ರಮವನ್ನಾಚರಿಸಲು ಗೆಳೆಯರೊಂದಿಗೆ ಪಬ್ ಗೆ ಹೋಗಿದ್ದ ವ್ಯಕ್ತಿಯೊಬ್ಬ ತನ್ನ ತಲೆಗೆ ತಾನೇ ಬಿಯರ್ ಬಾಟಲಿಯಿಂದ ಹೊಡೆದುಕೊಂಡು ಮೃತ ಪಟ್ಟಿರುವ ಘಟನೆ ದಕ್ಷಿಣ ದೆಹಲಿಯ ಹೌಜ್ ಖಾಜ್ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದೀಪಕ್ ಟಂಡನ್ (30) ಎಂದು ಗುರ್ತಿಸಲಾಗಿದ್ದು, ಈತ ಪಂಜಾಬ್ ಲುಧಿಯಾನಾ ಮೂಲದವನಾಗಿದ್ದಾನೆಂದು ತಿಳಿದುಬಂದಿದೆ. ಈತ ಗೆಳೆಯರೊಂದಿಗೆ ಹೊಸವರ್ಷಾಚರಣೆಯನ್ನು ಮಾಡಲೆಂದು ದೆಹಲಿಯ ಪಬ್ ವೊಂದಕ್ಕೆ ಶನಿವಾರ ರಾತ್ರಿ ಹೋಗಿದ್ದ. ಸಂಭ್ರದ ಮಧ್ಯೆ ಇದ್ದಕ್ಕಿದ್ದಂತೆ ಟಂಡನ್ ಬಿಯರ್ ಬಾಟಲಿಯಿಂದ ತನ್ನ ತಲೆಗೆ ಹೊಡೆದುಕೊಂಡಿದ್ದಾನೆ.
ವ್ಯಕ್ತಿಯ ಸಾವಿನ ಹಿಂದೆ ಕೈವಾಡವಿರುವುದಾಗಿ ಶಂಕೆಗಳು ವ್ಯಕ್ತವಾಗಿಲ್ಲ. ಮೃತ ವ್ಯಕ್ತಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ತನಗೆ ತಾನೇ ಬಾಟಲಿಯಿಂದ ಹೊಡೆದುಕೊಂಡಿದ್ದಾನೆ. ತೀವ್ರ ರಕ್ತಸ್ರಾವವಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿಲ್ಲ. ಆದರೆ, ಘಟನೆ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಇದರ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ್ದಾನೆ.
ವಿಡಿಯೋದಲ್ಲಿ ಟಂಡನ್ ಇದ್ದಕ್ಕಿದ್ದಂತೆ ತನ್ನ ತಲೆಗೆ ಬಾಟಲಿಯಿಂದ ಹೊಡೆದುಕೊಂಡಿದ್ದಾರೆ. ನಂತರ ಸ್ಥಳದಲ್ಲಿದ್ದ ಕೆಲವರು ಆತನನ್ನು ಕೂರಿಸಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದಿರುವ ಪೊಲೀಸರು ತಮ್ಮ ವಾಹನದ ಮೂಲಕವೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗುತ್ತಿರುವುದು ಕಂಡು ಬಂದಿದೆ.
ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಮೃತ ವ್ಯಕ್ತಿಯ ಗೆಳೆಯರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳುತ್ತಿದ್ದಾರೆ.