ರಾಮ್ ಪುರ್: ಸಮಾಜವಾದಿ ಪಕ್ಷದಲ್ಲಿ ಬಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ಜಮ್ಮ ಮಸೀದಿಯ ಇಮಾಮ್ ಸಯೀದ್ ಅಹ್ಮದ್ ಬುಖಾರಿ ಸಮಾಜವಾದಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರಿಗೆ ಮುಲಾಯಂ ಸಿಂಗ್ ಯಾದವ್ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಸಯೀದ್ ಅಹ್ಮದ್ ಬುಖಾರಿ, ಸಮಾಜವಾದಿ ಪಕ್ಷಕ್ಕೆ ಪಾಠ ಕಲಿಸಲು ಇದು ಸೂಕ್ತ ಸಮಯ ಎಂದು ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಪರ್ಯಾಯವನ್ನು ಪರಿಗಣಿಸಬೇಕೆಂದು ಬುಖಾರಿ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿರುವುದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 2012 ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ಯಾದವ್ ಗೆ ಬೆಂಬಲ ಘೋಷಿಸಿದ್ದ ಬುಖಾರಿ ಈಗ ಮುಲಾಯಂ ಸಿಂಗ್ ಯಾದವ್ ಮುಸ್ಲಿಂ ಸಮುದಾಯಕ್ಕೆ ಮುಲಾಯಂ ಮೋಸ ಮಾಡಿದ್ದಾರೆ ಆದ್ದರಿಂದ ಸಮಾಜವಾದಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಹೇಳಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮುಸ್ಲಿಂ ಸಮುದಾಯಕ್ಕೆ ಶೇ.18 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಆದರೆ ಈ ವರೆಗೂ ಭರವಸೆ ಈಡೇರಿಸಿಲ್ಲ. ಜೊತೆಗೆ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಒಂದೇ ವರ್ಷದಲ್ಲಿ 113 ಕೋಮುಗಲಭೆಗಳು ಸಂಭವಿಸಿದೆ ಎಂದು ಬುಖಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.