ದೇಶ

ಕಾಶ್ಮೀರದಲ್ಲಿ ಎಲ್'ಇಟಿ ಉಗ್ರನ ಬಂಧನ

Manjula VN

ಹಂದ್ವಾರ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನ್ನು ಜಮ್ಮು ಮತ್ತು ಕಾಶ್ಮೀರದ  21 ರಾಷ್ಟ್ರೀಯ ರೈಫಲ್ಸ್ ಪೊಲೀಸರು ಬಂಧನಕ್ಕೊಳಪಡಿಸಿರುವುದಾಗಿ ಬುಧವಾರ ತಿಳಿದುಬಂದಿದೆ.
 
ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿರುವ ಫ್ರೂಟ್ ಮಂಡಿ ಪ್ರದೇಶದಲ್ಲಿ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಆಶಿಕ್ ಅಹ್ಮದ್ ಎಂಬ ಉಗ್ರನನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಉಗ್ರನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 1 ಎಕೆ 47 ರೈಫಲ್, ಮೂರು ನಿಯತಕಾಲಿಕೆಗಳ ಜೊತೆಗೆ ಸಿಡಿಮದ್ದುಗಳು, ಚೀನಾಗೆ ಸೇರಿದ 1 ಪಿಸ್ತೂಲ್ ಜೊತೆಗೆ ಒಂದು ನಿಯತಕಾಲಿಕೆ, 3 ಗ್ರೆನೇಡ್ ಗಳು, 1 ಮ್ಯಾಗಜೀನ್ ಪೌಚ್ ಮತ್ತು 1 ನಕ್ಷೆಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.

ಬಂಧಿತ ಉಗ್ರನನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದು, ವಿಚಾರಣೆ ವೇಳೆ ಉಗ್ರ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಸೋಪೋರ್ ನಲ್ಲಿ ಕೆಲ ದಿನಗಳ ಹಿಂದಷ್ಟೇ ಎಲ್'ಇಟಿ ಕಮಾಂಡರ್ ಅಬು ಬಕರ್ ನನ್ನು ಭದ್ರತಾಪಡೆ ಹತ್ಯೆ ಮಾಡಿತ್ತು. ಅಬು ಬಕರ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದೆನೆಂದು ಅಹ್ಮದ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಇನ್ನು ಕೆಲವೇ ದಿನಗಳಲ್ಲಿ ಹಂದ್ವಾರದಲ್ಲಿರುವ ಭದ್ರತಾ ಪಡೆಗಳ ಕೇಂದ್ರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದೆ ಎಂದು ಹೇಳಿಕೊಂಡಿದ್ದಾನೆಂದು ಮೂಲಗಳು ತಿಳಿಸಿವೆ.

SCROLL FOR NEXT