ನವದೆಹಲಿ: ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ನ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ವಿಚಾರದಲ್ಲಿ ಚೀನಾದ ನಿರಂತರ ಅಡಚಣೆಗಳ ಹೊರತಾಗಿಯೂ ಭಾರತ ಮತ್ತೊಮ್ಮೆ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಲು ತಯಾರಿ ನಡೆಸಿದೆ.
ವಿಶ್ವಸಂಸ್ಥೆಗೆ ಮತ್ತೊಮ್ಮೆ ಮನವಿ ಸಲ್ಲಿಸುವ ಎಲ್ಲಾ ಆಯ್ಕೆಗಳು ಹಾಗೂ ಭಾರತದ ನಿಲುವನ್ನು ಬೆಂಬಲಿಸುವ ಎಲ್ಲಾ ಸದಸ್ಯರೊಂದಿಗೆ ಚರ್ಚಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ, ಆದರೆ ಮಸೂದ್ ಅಜರ್ ವಿಷಯವಾಗಿ ಯಾವಾಗ ವಿಶ್ವಸಂಸ್ಥೆಗೆ ಮನವಿ ಮಾಡಬೇಕೆಂಬುದು ಇನ್ನೂ ನಿರ್ಧರಿಸಿಲ್ಲ ಎಂದು ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಚೀನಾ ಭಾರತದ ಯತ್ನಕ್ಕೆ ಮತ್ತೊಮ್ಮೆ ಅಡಚಣೆ ಉಂಟು ಮಾಡಿ ವಿಶ್ವಸಂಸ್ಥೆಯಲ್ಲಿ ಉಗ್ರ ಮಸೂದ್ ಗೆ ನಿಷೇಧ ವಿಧಿಸುವ ವಿಚಾರದಲ್ಲಿ ಸತತ ಮೂರನೇ ಬಾರಿಗೆ ಭಾರತದ ಯತ್ನವನ್ನು ವಿಫಲಗೊಳಿಸಿತ್ತು.