ಕೋಲ್ಕತಾ: ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನು ಮುಂದುವರೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೇಶವನ್ನು ಅವ್ಯವಸ್ಥೆಯಿಂದ ಉಳಿಸಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿದ್ದಾರೆ.
ಎಲ್ಲಾ ಸಂಸ್ಥೆಗಳೂ ಆಕ್ರಮಣಕ್ಕೊಳಗಾಗಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಅವ್ಯವಸ್ಥೆಯಿಂದ ದೇಶವನ್ನು ಉಳಿಸಬೇಕೆಂದು ಪ್ರಣಬ್ ಮುಖರ್ಜಿಗೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಯೋಜನಾ ಆಯೋಗವನ್ನು ವಿಸರ್ಜಿಸಿ ತಮಗೆ ಬೇಕಾದ, ರಾಷ್ಟ್ರವನ್ನು ಅರ್ಥ ಮಾಡಿಕೊಳ್ಳದೇ ಇರುವವರನ್ನು ತಂದು ನೀತಿ ಆಯೋಗವನ್ನು ರಚಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಳಿದಾಸನಿಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿರುವ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಕಾಳಿದಾಸನಂತೆ ತಾನು ಕೂತಿರುವ ಮರದ ಕೊಂಬೆಯನ್ನೇ ಕತ್ತರಿಸಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ದೇಶವನ್ನು ರಕ್ಷಿಸಲು ರಾಷ್ಟ್ರೀಯ ಸರ್ಕಾರವೊಂದು ಅಧಿಕಾರಕ್ಕೆ ಬರಬೇಕಿದೆ. ಅಡ್ವಾಣಿ, ರಾಜನಾಥ್ ಸಿಂಗ್, ಜೇಟ್ಲಿ ಅವರ ಪೈಕಿ ಯಾರಾದರೂ ಒಬ್ಬರು ಅಂತಹ ಸರ್ಕಾರದ ನೇತೃತ್ವ ವಹಿಸಿಕೊಳ್ಳಬೇಕು, ಈಗಿನ ಸ್ಥಿತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು ಈ ನಿಟ್ಟಿನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸುಪ್ರೀಂ ಕೋರ್ಟ್ ಮಹತ್ವದ ಪಾತ್ರ ವಹಿಸಬೇಕಾದೆ ಎಂದು ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics