ದೇಶ

ನೋಟು ನಿಷೇಧದ ಎಫೆಕ್ಟ್: ಕಾಶ್ಮೀರದಲ್ಲಿ ಶೇ.60 ಹಿಂಸಾಚಾರ, ಶೇ.50 ಹವಾಲ ಚಟುವಟಿಕೆ ಬಂದ್!

Srinivas Rao BV
ನವದೆಹಲಿ: ನೋಟು ನಿಷೇಧದಿಂದ ಆದ ಪ್ರಯೋಜನಗಳ ಪಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಹವಾಲ ಜಾಲಕ್ಕೆ ಬಿದ್ದಿರುವ ಅಂಕುಶವೂ ಸೇರಿದ್ದು, ಕಣಿವೆ ರಾಜ್ಯದಲ್ಲಿ ಶೇ.60 ಭಯೋತ್ಪಾದನೆ ಹಾಗೂ ಶೇ.50 ರಷ್ಟು ಹವಾಲ ಜಾಲ ಬಂದ್ ಆಗಿವೆ. 
500, 1000 ರೂ ಮುಖಬೆಲೆಯ ನೋಟುಗಳು ಕಾಶ್ಮೀರದಲ್ಲಿ ಭಯೋತ್ಪಾದನೆ ಹಾಗೂ ಹವಾಲ ಜಾಲ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಹೆಚ್ಚು ನೆರವಾಗುತ್ತಿತ್ತು. ಆದರೆ ನ.8 ರಂದು ಕೇಂದ್ರ ಸರ್ಕಾರ ಘೋಷಿಸಿದ 500, 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಕಾಶ್ಮೀರದಲ್ಲಿ ನಡೆಯುತ್ತಿದ್ದ ಶೇ.60 ರಷ್ಟು ಭಯೋತ್ಪಾದಕ ಚಟುವಟಿಕೆಗಳು, ಶೇ.50 ರಷ್ಟು ಹವಾಲ ಜಾಲ ಸದ್ದಿಲ್ಲದೇ ನೆಲಕಚ್ಚಿವೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ. 
ಭಯೋತ್ಪಾದನೆಯ ಉತ್ತೇಜನಕ್ಕೆ ಪಾಕಿಸ್ತಾನ ಮುದ್ರಿಸುತ್ತಿದ್ದ ಭಾರತೀಯ ರೂಪಾಯಿಯ ನಕಲಿ ನೋಟುಗಳನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿತ್ತು. ಆದರೆ ನೋಟು ನಿಷೇಧದ ನಂತರ ನಕಲಿ ನೋಟುಗಳ, ಹವಾಲ ದಂಧೆಗೆ ಕಡಿವಾಣ ಬಿದ್ದಿದ್ದು, ಕಾಶ್ಮೀರದಲ್ಲಿ ಕಲ್ಲುತೂರಾಟ ಮಾಡುವವರಿಗೆ, ಭಯೋತ್ಪಾದಕರಿಗೆ ಹಣ ನೀಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ, ಪರಿಣಾಮ ಶೇ.6೦ ರಷ್ಟು ಭಯೋತ್ಪಾದಕ ಚಟುವಟಿಕೆಗಳು ಬಂದ್ ಆಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 
ನೋಟು ನಿಷೇಧದ ನಂತರ ಕೃತಕವಾಗಿ ಸೃಷ್ಟಿಯಾಗಿದ್ದ ರಿಯಲ್ ಎಸ್ಟೇಟ್ ಮಾರುಕಟ್ಟೆ ದರವನ್ನೂ ಕಡಿಮೆ ಮಾಡಿದ್ದು, ಮಾವೊವಾದಿಗಳಿಗೂ ತಮ್ಮ ಸಂಘಟನೆಗಳ ಚಟುವಟಿಕೆಗಳಿಗೆ ಹಣ ಸಂಗ್ರಹಿಸುವುದು ಕಷ್ಟವಾಗುತ್ತಿದ್ದು, ಮಾವೋವಾದಿಗಳ ಬೆಂಬಲಿಗರಿಂದ ಈ ವರೆಗೂ 90 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. 
SCROLL FOR NEXT