ದೇಶ

ನ್ಯಾಯಯುತ ಚುನಾವಣೆಗಾಗಿ ಮೋದಿ ನಾಮಫಲಕಗಳನ್ನು ತೆಗೆಯಿರಿ: ಚು.ಆ.ಕ್ಕೆ ಕಾಂಗ್ರೆಸ್ ಪತ್ರ

Manjula VN

ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಪಂಚ ರಾಜ್ಯಗಳಲ್ಲಿ ಚುನಾವಣೆ ಆರಂಭವಾಗುತ್ತಿದ್ದು, ನ್ಯಾಯಯುತ ಚುನಾವಣೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಮಫಲಕಗಳು ಹಾಗೂ ಭಿತ್ತಿಪತ್ರಗಳನ್ನು ತೆಗೆಯಿರಿ ಎಂದು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸೋಮವಾರ ಪತ್ರವೊಂದನ್ನು ಬರೆದಿದೆ.

ಉತ್ತರ ಪ್ರದೇಶ ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರಗಳಲ್ಲಿ ಚುನಾವಣೆ ಆರಂಭವಾಗುತ್ತಿದೆ. ಗ್ಯಾಸ್ ಸಿಲಿಂಡರ್ ಸಂಪರ್ಕ ಒದಗಿಸಿರುವ ಕುರಿತಂತೆ ಈ ಐದು ರಾಜ್ಯಗಳಲ್ಲಿ ಎಲ್ಲೆಡೆ ಪ್ರಧಾನಿ ಮೋದಿಯವರ ನಾಮಫಲಕ ಹಾಗೂ ಭಿತ್ತಿಚಿತ್ರಗಳು ರಾರಾಜಿಸುತ್ತಿವೆ. ಚುನಾವಣಾ ಸಂದರ್ಭದಲ್ಲಿ ಈ ರೀತಿಯ ಜಾಹೀರಾತುಗಳು ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಪತ್ರದಲ್ಲಿ ಹೇಳಿಕೊಂಡಿದೆ ಎಂದು ತಿಳಿದುಬಂದಿದೆ.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ಪ್ರಧಾನಮಂತ್ರಿಗಳ ಭಾವಿಚಿತ್ರ ಬಳಸಿಕೊಂಡು ಭಿತ್ತಿಚಿತ್ರಗಳು, ನಾಮಫಲಕಗಳು ಹಾಗೂ ಬ್ಯಾನರ್ ಗಳನ್ನು ಹಾಕುವುದು ನೀತಿ ಸಂಹಿತೆಗೆ ವಿರುದ್ಧವಾಗಿದ್ದು, ಇದು ನ್ಯಾಯಯುತ ಚುನಾವಣೆಗೆ ದಾರಿ ಮಾಡಿಕೊಡುವುದಿಲ್ಲ. ಹೀಗಾಗಿ ಕೂಡಲೇ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಿ ಜಾಹೀರಾತು ಫಲಕಗಳನ್ನು ತೆಗೆಯುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಬೇಕೆಂದು ಕಾಂಗ್ರೆಸ್ ಹೇಳಿಕೊಂಡಿದೆ.

ಕೇಂದ್ರದ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದ್ದು, ಪಂಚ ರಾಜ್ಯಗಳ ಚುನಾವಣೆ ಫೆಬ್ರವರಿ 4ರಿಂದ ಆರಂಭವಾಗಲಿದೆ.

SCROLL FOR NEXT