ಅಖಿಲೇಶ್ ಯಾದವ್ - ಮುಲಾಯಂ ಸಿಂಗ್ ಯಾದವ್
ಲಖನೌ: ಸಮಾಜವಾದಿ ಪಕ್ಷದ ಚಿಹ್ನೆ 'ಸೈಕಲ್' ಯಾರಿಗೆ ಸೇರಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮಧ್ಯಂತರ ಆದೇಶಕ್ಕೂ ಮುನ್ನವೇ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿರುದ್ಧವೂ ಸ್ಪರ್ಧಿಸುವುದಾಗಿ ಸೋಮವಾರ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್ ಅವರು, ಅಖಿಲೇಶ್ ಅವರು ಸಮಾಜವಾದಿ ಪಕ್ಷವನ್ನು ಮುಸ್ಲಿಂ ವಿರೋಧಿಯಾಗಿ ಮಾಡಿದ್ದಾರೆ. ಅವರಿಂದ ಪಕ್ಷದ ದೊಡ್ಡ ಹಾನಿಯಾಗಿದೆ ಎಂದು ಆರೋಪಿಸಿದ್ದಾರೆ.
ಪಕ್ಷ ಮತ್ತು ಸೈಕಲ್ ಉಳಿಸಲು ನಾನು ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಆದರೂ ಅಖಿಲೇಶ್ ನನ್ನ ಮಾತು ಕೇಳದೆ ಪ್ರತ್ಯೇಕವಾಗಲು ಬಯಸಿದರೆ, ನಾನು ಅವರ ವಿರುದ್ಧವೇ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ಅಖಿಲೇಶ್ ಅವರು ವಿರೋಧಿಗಳ ಸ್ನೇಹ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸ್ಪರ್ಧಿಸಲು ಬೆಂಬಲ ನೀಡುವಂತೆ ನಾನು ಜನತೆಯನ್ನು ಕೇಳುತ್ತೇನೆ ಎಂದು ಮುಲಾಯಂ ತಿಳಿಸಿದ್ದಾರೆ.
ಇದೇ ವೇಳೆ ತಾವು ಯಾವುದೇ ಕಾರಣಕ್ಕೂ ಪಕ್ಷ ಚಿಹ್ನೆ ಸೈಕಲ್ ಅನ್ನು ಬಿಟ್ಟುಕೊಡುವುದಿಲ್ಲ ಎಂದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ, ಈ ಸಂಬಂಧ ಕೋರ್ಟ್ ನಲ್ಲೂ ಹೋರಾಟ ನಡೆಸಲು ಸಿದ್ಧ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics