ದುರ್ಗಾಪುರ(ಪಶ್ಚಿಮ ಬಂಗಾಳ): ಕೇಂದ್ರ ಸಚಿವ ಬಬುಲ್ ಸುಪ್ರಿಯೋ ಅವರ ಬೆಂಗಾವಲು ಪಡೆಯ ಮೇಲೆ ಸೋಮವಾರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತು ದಾಳಿ ಮಾಡಿದ್ದು, ಅದೃಷ್ಟ ವಶಾತ್ ಸಚಿವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.
ದುರ್ಗಾಪುರ ಕಲ್ಲಿದ್ದಲು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಲು ತೆರಳಿದ್ದ ವೇಳೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಬೆಂಗಾವಲು ಪಡೆ ಹಾಗೂ ನನ್ನ ಮೇಲೆ ದಾಳಿ ನಡೆಸಿದ್ದಾರೆ ಎಂದು ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ರಾಜ್ಯ ಸಚಿವ ಬಬುಲ್ ಸುಪ್ರಿಯೋ ಅವರು ಆರೋಪಿಸಿದ್ದಾರೆ.
ನನ್ನ ಕಾರು ವಿದ್ಯುತ್ ಸ್ಥಾವರ ಪ್ರವೇಶಿಸುತ್ತಿದ್ದಂತೆ ಟಿಎಂಸಿ ಕಾರ್ಯಕರ್ತರು ನನ್ನ ವಿರುದ್ಧ ಘೋಷಣೆ ಕೂಗಿದರು ಮತ್ತು ನನ್ನ ಕಾರ್ ಮೇಲೆ ಕಲ್ಲು ತೂರಾಟ ಸಹ ನಡೆಸಿದರು. ಆದರೆ ಸ್ಥಳೀಯ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸುಪ್ರಿಯೋ ಆರೋಪಿಸಿದ್ದಾರೆ.
ಸಿಐಎಸ್ಎಫ್ ಹಿರಿಯ ಅಧಿಕಾರಿಯೊಬ್ಬರು ಸಹಾಯ ಮಾಡುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದಿದ್ದಾರೆ. ಇನ್ನು ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ.