ದೇಶ

ಉ.ಪ್ರದೇಶ ಚುನಾವಣೆ: ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ, ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ

Lingaraj Badiger
ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಭಾನುವಾರ ತಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಇಂದು ತಮ್ಮ ಪತ್ನಿ ಹಾಗೂ ಸಂಸದೆ ಡಿಂಪಲ್ ಯಾದವ್ ಅವರೊಂದಿಗೆ ಅಖಿಲೇಶ್ ಯಾದವ್ ಅವರು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದರು. ಆದರೆ ಪಕ್ಷದ ಪ್ರಮುಖ ಕಾರ್ಯಕ್ರಮದಲ್ಲಿ ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಚಿಕ್ಕಪ್ಪ ಶಿವಪಾಲ್ ಯಾದವ್ ಅವರ ಗೈರು ಎದ್ದು ಕಾಣುತ್ತಿತ್ತು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಖಿಲೇಶ್ ಯಾದವ್ ಅವರು, 2012ರಲ್ಲಿ ನೀಡಿದ ಭರವಸೆಗಳನ್ನು ಯಶಸ್ವಿಯಾಗಿ ಕಾರ್ಯಗತ ಗೊಳಿಸಿದ್ದೇವೆ. ಪಕ್ಷದ ಎಲ್ಲ ಶಾಸಕರು ಅವರವರ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ನಿರ್ವಹಣೆ ತೋರಿದ್ದಾರೆ. ನಮ್ಮ ಮೇಲೆ ಜನತೆ ಭರವಸೆ ಇರಿಸಿದ್ದು ಈ ಭಾರಿಯೂ ಸೈಕಲ್​ಗೆ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉತ್ತರ ಪ್ರದೇಶ ಸಿಎಂ, ಅಭಿವೃದ್ಧಿ ಎಂಬ ಬಾಯ್ಮಾತಲ್ಲೇ ರಾಜ್ಯದ ಮತ್ತು ರಾಷ್ಟ್ರದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸಮಾಧಾನಪಡಿಸುತ್ತಿದ್ದಾರೆ. ಅಭಿವೃದ್ಧಿ ಭರವಸೆಗಳನ್ನು ಕಾರ್ಯಗತಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಅಚ್ಛೇ ದಿನ ತರುತ್ತೇವೆ ಎಂದು ಭರವಸೆ ನೀಡಿದರು. ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆಯುತ್ತ ಬಂದರೂ ಅಚ್ಛೇ ದಿನದ ಸುಳಿವಿಲ್ಲ. ಜನತೆ ಈಗಲೂ ಅಚ್ಛೇ ದಿನದ ಹುಡುಕಾಟ ನಡೆಸುತ್ತಿದ್ದಾರೆ. ಅಚ್ಛೇ ದಿನದ ಹೆಸರಿನಲ್ಲಿ ನಮ್ಮ ಜತೆ ಯೋಗ ಮಾಡಿಸಿದರು, ಕೈಗೆ ಪೊರಕೆ ಕೊಟ್ಟರು ಎಂದು ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದರು.
ರಾಜ್ಯದಲ್ಲಿ 24 ಗಂಟೆ ವಿದ್ಯುತ್, ಲಖನೌನಲ್ಲಿ ಏರ್ ಆಂಬುಲೆನ್ಸ್, 1 ಕೋಟಿ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರುಪಾಯಿ ಪಿಂಚಣಿ, ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಟಿಕೆಟ್ ದರದಲ್ಲಿ ಶೇ.50ರಷ್ಟು ವಿನಾಯ್ತಿ ಸೇರಿದಂತೆ ಸಮಾಜವಾದಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದೆ.
SCROLL FOR NEXT