ದೇಶ

ಜಲ್ಲಿಕಟ್ಟು ವಿವಾದ: ಕೆಲ ಪಕ್ಷಗಳು ಕೇಂದ್ರ ವಿರೋಧಿ ಭಾವನೆಯನ್ನು ಹುಟ್ಟುಹಾಕುತ್ತಿವೆ- ನಾಯ್ಡು

Manjula VN

ಹೈದರಾಬಾದ್: ಜಲ್ಲಿಕಟ್ಟು ಪ್ರತಿಭಟನೆಯನ್ನು ತಮ್ಮ ದುರುಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವ ಕೆಲ ಪಕ್ಷಗಳು, ಜನರಲ್ಲಿ ಕೇಂದ್ರ ವಿರೋಧ ಮನೋಭಾವನೆಗಳನ್ನು ಹುಟ್ಟುಹಾಕುತ್ತಿವೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸೋಮವಾರ ಹೇಳಿದ್ದಾರೆ.

ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಂದನೆ ನೀಡಿದ್ದರೂ ತಮಿಳುನಾಡಿನಲ್ಲಿ ಈಗಲೂ ಪ್ರತಿಭಟನೆಗಳು ನಡೆಸುತ್ತಿವೆ. ಅಲ್ಲದೆ, ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವೆಂಕಯ್ಯ ನಾಯ್ಡು ಅವರು, ಚೆನ್ನೈ ಹಾಗೂ ತಮಿಳುನಾಡಿನ ಹಲವೆಡೆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದೆ. ತಮಿಳುನಾಡು ಜನತೆ ಈ ಕೂಡಲೇ ತಮ್ಮ ಪ್ರತಿಭಟನೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ.

ಜನರ ಭಾವನೆ, ನಂಬಿಕೆಗಳು ಹಾಗೂ ಸಾಂಸ್ಕೃತಿಕ ತತ್ತ್ವಗಳನ್ನು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಆಲೋಚನೆ ಮಾಡುತ್ತದೆ. ತಮಿಳುನಾಡು ಸರ್ಕಾರ ಈಗಾಲೇ ಜಲ್ಲಿಕಟ್ಟು ಕ್ರೀಡೆಗೆ ಕುರಿತ ಶಾಸನಕ್ಕೆ ಅನುಮೋದನೆಯನ್ನು ನೀಡಿದ್ದು, ಜನತೆ ತಮ್ಮ ಪ್ರತಿಭಟನೆಯನ್ನು ಹಿಂಪಡೆಯಬೇಕಿದೆ.

ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಪ್ರತಿಭಟನೆಯನ್ನು ತಮ್ಮ ದುರುಪಯೋಗಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದು, ಜನತೆಯಲ್ಲಿ ಕೇಂದ್ರ ವಿರೋಧಿ ಮನೋಭಾವನೆಯನ್ನು ಹುಟ್ಟುಹಾಕಲು ಯತ್ನಿಸುತ್ತಿದೆ. ಕಾಂಗ್ರೆಸ್ ಹಾಗೂ ಡಿಎಂಕೆ ಇಂತಹ ಪ್ರತಿಭಟನೆಗೆ ಬೆಂಬಲ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ತಪ್ಪಾದರೂ ಏನು? ಎಂದು ಪ್ರಶ್ನಿಸಿದ್ದಾರೆ.

ಯುವಕರೊಂದಿಗೆ ನನಗೆ ಯಾವುದೇ ಸಮಸ್ಯೆಯಿಲ್ಲ. ಸಾಕಷ್ಟು ಜನರು ಜಲ್ಲಿಕಟ್ಟು ಕುರಿತಂತೆ ಪ್ರಾಮಾಣಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕ್ರೀಡೆಗಳಿಗೆ ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ.

SCROLL FOR NEXT