ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿ
ನವದೆಹಲಿ: ಅಗಸ್ತಾ ವೆಸ್ಟ್ ಲ್ಯಾಂಡ್ ಕೇಸಿಗೆ ಸಂಬಂಧಪಟ್ಟಂತೆ ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿ ಮತ್ತು ಇತರರ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಫೆಬ್ರುವರಿ 1ಕ್ಕೆ ಮುಂದೂಡಿದೆ.
ಈ ಹಿಂದೆ ಡೆಲ್ಲಿ ಹೈಕೋರ್ಟ್ ಇದೇ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮೊನ್ನೆ 18ರಂದು ಇಂದಿಗೆ(ಜ.25ಕ್ಕೆ) ಮುಂದೂಡಿತ್ತು.
ಸಿಬಿಐ ವಿಶೇಷ ನ್ಯಾಯಾಲಯ ಈ ಹಿಂದೆ ಜನವರಿ 4ರಂದು ಎಸ್.ಪಿ.ತ್ಯಾಗಿಯವರ ಸೋದರ ಸಂಜೀವ್ ತ್ಯಾಗಿ ಮತ್ತು ಅವರ ಪರ ವಕೀಲ ಗೌತಮ್ ಖೈತಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ನಂತರ ಸಂಜೀವ್ ಮತ್ತು ಖೈತಾನ್ ಅವರಿಗೆ ಕೋರ್ಟ್, ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸದಂತೆ ಮತ್ತು ಪೂರ್ವಾನುಮತಿಯಿಲ್ಲದೆ ದೆಹಲಿ ಬಿಡದಂತೆ ಆದೇಶ ನೀಡಿತ್ತು.
72 ವರ್ಷದ ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿಯವರು ಎಷ್ಟು ಲಂಚ ಸ್ವೀಕರಿಸಿದ್ದಾರೆ ಎಂದು ತಿಳಿಸಲು ವಿಫಲವಾಗಿದೆ ಎಂದು ಕಾರಣ ನೀಡಿ ನ್ಯಾಯಾಲಯ ಈ ಮುನ್ನ ಅವರಿಗೆ ಜಾಮೀನು ನೀಡಿತ್ತು.
2007ರಲ್ಲಿ ಸೇವೆಯಿಂದ ನಿವೃತ್ತರಾದ ಎಸ್.ಪಿ.ತ್ಯಾಗಿ ಮತ್ತು ಅವರ ಸಂಬಂಧಿಕರಾದ ಸಂಜೀವ್ ಮತ್ತು ಖೈತಾನ್ 2016 ಡಿಸೆಂಬರ್ 9ರಂದು ಸಿಬಿಐನಿಂದ ಬಂಧಿತರಾಗಿದ್ದರು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಇಂಗ್ಲೆಂಡ್ ಮೂಲದ ಕಂಪೆನಿಯಿಂದ 12 ವಿವಿಐಪಿ ಹೆಲಿಕಾಪ್ಟರ್ ಗಳ ಖರೀದಿಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಅವರ ಮೇಲಿದೆ.