ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಚುನಾವಣೆ ವೆಚ್ಚ ಮತ್ತು ನಿರ್ವಹಣಾ ಅನಾನುಕೂಲತೆಗಳನ್ನು ಕಡಿಮೆ ಮಾಡಬಹುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಅವರು ದೆಹಲಿಯಲ್ಲಿಂದು ಏಳನೇ ರಾಷ್ಟ್ರೀಯ ಮತದಾರರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜಕೀಯ ವಲಯದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನ ಸಭೆಗಳಲ್ಲಿ ಒಟ್ಟಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಸಹಮತಕ್ಕೆ ಬಂದು ಈ ಉಪಕ್ರಮವನ್ನು ಅಳವಡಿಸಿಕೊಂಡರೆ ಸುಧಾರಣೆಯಾಗಲು ಸಾಧ್ಯ ಎಂದರು.
2014ರಲ್ಲಿ ದೇಶದ 834 ದಶಲಕ್ಷ ಮತದಾರರ ಪೈಕಿ ಶೇಕಡಾ 66ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಇಷ್ಟು ದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಚುನಾವಣಾ ಆಯೋಗವನ್ನು ಅವರು ಅಭಿನಂದಿಸಿದರು. ಅಲ್ಲದೆ ತಮ್ಮ ಹಕ್ಕು ಚಲಾಯಿಸಿದ ಭಾರತೀಯ ಮತದಾರರಿಗೆ ಕೂಡ ಧನ್ಯವಾದ ಹೇಳಿದರು.
ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರೇರೇಪಿಸಲು ಚುನಾವಣಾ ಆಯೋಗಕ್ಕೆ ಅತ್ಯಂತ ಬಲಿಷ್ಠ ಬೆಂಬಲ ಬೇಕಾಗಿದೆ.ಚುನಾವಣಾ ಆಯೋಗ ಸಂಪೂರ್ಣ ಸ್ವತಂತ್ರ ಮತ್ತು ಸ್ಪರ್ಧಾತ್ಮಕ ಸಂಸ್ಥೆಯಾಗಬೇಕು. ಕಳೆದ ಹಲವು ವರ್ಷಗಳಿಂದ ಚುನಾವಣಾ ಆಯೋಗ ಅದನ್ನು ಸಾಬೀತುಪಡಿಸಿದೆ. ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಶ್ರಮಿಸಿದೆ ಮತ್ತು ವಿಶ್ವಾದ್ಯಂತ ಅದಕ್ಕೆ ಪ್ರಶಂಸೆ ಸಿಕ್ಕಿದೆ ಎಂದರು.
ಮುಂದಿನ ವರ್ಷಗಳಲ್ಲಿ ಕೂಡ ಆಯೋಗ ತನ್ನ ಗುಣಮಟ್ಟವನ್ನು ಕಾಪಾಡಿ ಸುಧಾರಿಸಲಿದೆ ಎಂದು ಅವರು ಹೇಳಿದರು.
ಅನ್ ಫೋಲ್ಡಿಂಗ್ ಇಂಡಿಯನ್ ಎಲೆಕ್ಷನ್-ಜರ್ನಿ ಅಫ್ ದ ಲಿವಿಂಗ್ ಡೆಮಾಕ್ರಸಿ ಪುಸ್ತಕದ ಮೊದಲ ಪ್ರತಿಯನ್ನು ಕಾರ್ಯಕ್ರಮದಲ್ಲಿ ಚುನಾವಣಾ ಆಯುಕ್ತ ಡಾ.ನಜೀಮ್ ಜೈದಿ ರಾಷ್ಟ್ರಪತಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಆಯ್ದ ಯುವ ಮತದಾರರಿಗೆ ಚುನಾವಣಾ ಗುರುತು ಚೀಟಿ ವಿತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics