ಬಾಂಗ್ಲಾ ಯುದ್ಧದ ನಂತರ ಭಾರತ ಪಿಒಕೆ ವಶಪಡಿಸಿಕೊಳ್ಳಲಿದೆ ಎಂದುಕೊಂಡಿತ್ತು ಅಮೆರಿಕಾ!
ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದ ನಂತರ ಇಂದಿರಾ ಗಾಂಧಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಪಶ್ಚಿಮ ಪಾಕಿಸ್ತಾನದ ವಿರುದ್ಧ ದಾಳಿಗೆ ಸೂಚಿಸುತ್ತಾರೆ ಎಂದು ಅಮೆರಿಕ ಭಾವಿಸಿತ್ತು
ನವದೆಹಲಿ: ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದ ನಂತರ ಭಾರತದ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಪಶ್ಚಿಮ ಪಾಕಿಸ್ತಾನದ ವಿರುದ್ಧ ದಾಳಿಗೆ ಸೂಚಿಸುತ್ತಾರೆ ಎಂದು ಅಮೆರಿಕ ಭಾವಿಸಿತ್ತು ಎಂದು ಸಿಐಎ ಬಿಡುಗಡೆ ಮಾಡಿರುವ ವರದಿಗಳು ಹೇಳಿವೆ.
ಭಾರತ-ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಬೆನ್ನಲ್ಲೇ ವಾಷಿಂಗ್ ಟನ್ ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ಕಾರ್ಯತಂತ್ರವನ್ನು ಸಿದ್ಧಪಡಿಸಬೇಕೆಂಬುದು ಸ್ಪಷ್ಟವಾಗಿತ್ತು. ಬಾಂಗ್ಲಾ ವಿಮೋಚನೆ ಬೆನಲ್ಲೇ ನಡೆಯಬಹುದಾದ ಬೆಳವಣಿಗೆಗಳ ಬಗ್ಗೆ ಅಂದಿನ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಎ ಕಿಸ್ಸಿಂಗರ್ ವಿಶ್ಲೇಷಣೆ ನೀಡಿದ್ದರು. ಈ ಪೈಕಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯಲು ಮತ್ತೊಂದು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಭಾವಿಸಲಾಗಿದ್ದನ್ನು ಸಿಐಎ ವರದಿಗಳ ಮೂಲಕ ತಿಳಿದುಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವುದಷ್ಟೇ ಅಲ್ಲದೇ, ಪಾಕಿಸ್ತಾನ ಶಸ್ತ್ರಾಗಾರ, ವಾಯುಪಡೆ ಶಕ್ತಿಯನ್ನು ನಾಶ ಮಾಡಬಹುದೆಂದೂ ಅಂದಾಜಿಸಲಾಗಿತ್ತು ಎಂದು ಸಿಐಎ ಹೇಳಿದೆ.