ಸುನಂದಾ ಪುಷ್ಕರ್ (ಸಂಗ್ರಹ ಚಿತ್ರ)
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಸಾವಿನ ಕುರಿತು ವರದಿ ಸಲ್ಲಿಸಲು ರಚಿಸಲಾಗಿದ್ದ ವೈದ್ಯಕೀಯ ಮಂಡಳಿ ದೆಹಲಿ ಪೊಲೀಸರಿಗೆ ಶನಿವಾರ ಸಲ್ಲಿಸಿದ ವರದಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ವಿಫಲವಾಗಿದೆ.
ವೈದ್ಯಕೀಯ ಮಂಡಳಿ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಿದ ವರದಿಯಲ್ಲಿ ವೈದ್ಯಕೀಯ ಮಂಡಳಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ದೆಹಲಿಯ ಏಮ್ಸ್ ನೀಡಿರುವ ವರದಿಯನ್ನು ಅಧ್ಯಯನ ನಡೆಸಿ ಸುನಂದಾ ಪುಷ್ಕರ್ ಅವರ ಸಾವಿಗೆ ನಿಖರ ಕಾರಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಏಕೆಂದರೆ ಏಮ್ಸ್ ನ ವಿಧಿ ವಿಜ್ಞಾನ ಪ್ರಯೋಗಾಲಯ ಪರೀಕ್ಷೆ ನಡೆಸಿ ಸುನಂದಾ ಪುಷ್ಕರ್ ಅವರು ವಿಷ ಪ್ರಾಶನದಿಂದ ಮತ್ತು ಡ್ರಗ್ಸ್ ನಿಂದ ಮೃತಪಟ್ಟಿದ್ದಾರೆ ಎಂದು ಹೇಳಿದೆ.
ದೆಹಲಿ ಪೊಲೀಸರು ಇದೀಗ ಸುನಂದಾ ಅವರ ಮೊಬೈಲ್ ನಿಂದ ಅಳಿಸಲಾದ ಸಂಭಾಷಣೆಯನ್ನು ಪುನಃ ತೆಗೆಯಲು ಪ್ರಯತ್ನಿಸುತ್ತಿದ್ದಾರೆ.ಇನ್ನೊಂದೆಡೆ ಇಂದು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಸುಧೀರ್ ಗುಪ್ತಾ, ಸುನಂದಾ ಪುಷ್ಕರ್ ಅವರ ಸಾವು ಅಸಹಜವಾಗಿದ್ದು ವಿಷ ಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಸುನಂದಾ ಪುಷ್ಕರ್ ಅವರ ಸಾವು ಅಸಹಜವಾಗಿದೆ. ಇದು ವಿಷ ಸೇವನೆಯಿಂದ ಉಂಟಾದ ಸಾವು ಎಂದು ನಾವು ಸ್ಪಷ್ಟವಾಗಿ ತಿಳಿಸಿದ್ದೆವು. ಸಾವು ನಡೆದ ಸ್ಥಳದಲ್ಲಿ ಕೆಲವೊಂದು ಡ್ರಗ್ಸ್ ಮತ್ತು ವಿಷ ಸಿಕ್ಕಿದ್ದರಿಂದ ಅಲ್ಲಿನ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಈ ಅಭಿಪ್ರಾಯವನ್ನು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುನಂದಾ ಅವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ಇದನ್ನು ಅಮೆರಿಕಾದ ವಿಧಿ ವಿಜ್ಞಾನ ಪ್ರಯೋಗಾಲಯದ ರಸಾಯನ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ ಎಂದು ಏಮ್ಸ್ ತನ್ನ ಈ ಹಿಂದಿನ ವರದಿಯಲ್ಲಿ ಕೂಡ ತಿಳಿಸಿತ್ತು ಎಂದು ಹೇಳಿದ್ದಾರೆ.
2014 ಜನವರಿ 17ರಂದು ರಾತ್ರಿ ದಕ್ಷಿಣ ದೆಹಲಿಯ ಸ್ಟಾರ್ ಹೊಟೇಲ್ ವೊಂದರಲ್ಲಿ ಸುನಂದಾ ಪುಷ್ಕರ್ ಮೃತದೇಹ ಪತ್ತೆಯಾಗಿತ್ತು. ಅವರ ಪತಿ ತರೂರ್ ಅವರೊಂದಿಗೆ ಪಾಕಿಸ್ತಾನ ಪತ್ರಕರ್ತೆ ಮೆಹರ್ ತರಾರ್ ಅಕ್ರಮ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದ್ದು, ಈ ವಿಷಯದ ಕುರಿತು ಇಬ್ಬರ ಮಧ್ಯೆ ಟ್ವಿಟ್ಟರ್ ನಲ್ಲಿ ಜಗಳಗಳಾಗುತ್ತಿದ್ದವು ಎಂದು ಹೇಳಲಾಗುತ್ತಿದೆ.