ಪಾಟ್ನಾ: ಮಹಿಳೆಯರ ಭದ್ರತೆ ವಿಚಾರವಾಗಿ ಉತ್ತರ ಪ್ರದೇಶ ಮತ್ತೊಮ್ಮೆ ಮುಜುಗರಕ್ಕೊಳಪಡಬೇಕಾದ ಪರಿಸ್ಥಿತಿಯೊಂದು ತಲೆದೋರಿದ್ದು, 9 ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರ ಮೇಲೆ ನಾಲ್ಕನೇ ಬಾರಿಗೆ ಆ್ಯಸಿಡ್ ದಾಳಿ ಮಾಡಲಾಗಿದೆ.
ಉತ್ತರ ಪ್ರದೇಶದ ಲಖನೌನ ಅಲಿಗಂಜ್ ನಲ್ಲಿರುವ ತನ್ನ ಹಾಸ್ಟೆಲ್ ನಲ್ಲಿ ತಂಗಿದ್ದ ವೇಳೆಯಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.
ಮಹಿಳೆಯ ಮುಖದ ಬಲಭಾಗಕ್ಕೆ ಹಾನಿಯಾಗಿದ್ದು, ಕೂಡಲೇ ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ನೀರು ತರಲು ಎಂದು ಹಾಸ್ಟೆಲ್ ಸಮೀಪದ ಬೋರ್ ವೆಲ್ ಬಂದಾಗ ಈ ದಾಳಿ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಈ ಹಿಂದೆ ಇದೇ ಮಹಿಳೆ ಮೇಲೆ 3 ಬಾರಿ ಆ್ಯಸಿಡ್ ದಾಳಿಯಾಗಿತ್ತು. ಇತ್ತೀಚೆಗೆ ಅಂದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಮಹಿಳೆ ರಾಯ್ ಬರೇಲಿಯಲ್ಲಿರುವ ತನ್ನ ಗ್ರಾಮದಿಂದ ಮಹಿಳೆ ಲಖನೌಗೆ ರೈಲಿನಲ್ಲಿ ವಾಪಸ್ ಆಗುತ್ತಿದ್ದಾಗ ದಾಳಿ ಮಾಡಲಾಗಿತ್ತು. ಈ ವೇಳೆ ಆಕೆಯ ಕುತ್ತಿಗೆ ಭಾಗಕ್ಕೆ ಹಾನಿಯಾಗಿತ್ತು.
ಅಂದು ಸ್ವತಃ ಸಿಎಂ ಯೋಗಿ ಆದಿತ್ಯಾನಾಥ್ ಅವರು ಆಸ್ಪತ್ರೆಗೆ ತೆರಳಿ ಮಹಿಳೆ ಸಾಂತ್ವನ ಹೇಳಿದ್ದರಲ್ಲದೇ ಪರಿಹಾರ ಕೂಡ ನೀಡಿದ್ದರು. ಅಂತೆಯೇ ಮಹಿಳೆ ಉಳಿದುಕೊಂಡಿರುವ ಹಾಸ್ಟೆಲ್ ಗೆ ಭದ್ರತೆ ನಿಯೋಜಿಸಲಾಗಿತ್ತು. ನಿನ್ನೆ ಶಸ್ತ್ರ ಸಜ್ಜಿತ ಭದ್ರತಾ ಸಿಬ್ಬಂದಿ ಇರುವಾಗಲೇ ಮಹಿಳೆ ಮೇಲೆ ಮತ್ತೆ ಆ್ಯಸಿಡ್ ದಾಳಿ ಮಾಡಲಾಗಿದೆ.
ಪೊಲೀಸರು ತಿಳಿಸಿರುವಂತೆ ಪ್ರಸ್ತುತ 2 ಮಕ್ಕಳ ತಾಯಿಯಾಗಿರುವ ಮಹಿಳೆ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, 9 ವರ್ಷಗಳ ಹಿಂದೆ ಅಂದರೆ 2008ರಲ್ಲಿ ಆಕೆಯ ಗ್ರಾಮದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಗೈದಿದ್ದರು. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದಿಗೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, 2011ರಲ್ಲಿ ಮೊದಲ ಬಾರಿಗೆ ಮಹಿಳೆ ಮೇಲೆ ಆ್ಯಸಿಡ್ ದಾಳಿಯಾಗಿತ್ತು. ಬಳಿಕ 2013ರಲ್ಲಿ ಮತ್ತು ಇದೇ ವರ್ಷದ ಮಾರ್ಚ್ ತಿಂಗಳಲ್ಲಿಯೂ ಆ್ಯಸಿಡ್ ದಾಳಿಯಾಗಿತ್ತು.
ಇದೀಗ ನಾಲ್ಕನೇ ಬಾರಿ ಮತ್ತೆ ದಾಳಿ ಮಾಡಲಾಗಿದ್ದು, ಮಹಿಳೆ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳೇ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.