ದೇಶ

ಆನ್ ಲೈನ್ ಬುಕಿಂಗ್ ರೈಲು ಟಿಕೆಟ್ ಗಳ ಸೇವಾ ಶುಲ್ಕ ವಿನಾಯ್ತಿ: ಸೆಪ್ಟೆಂಬರ್ ವರೆಗೆ ವಿಸ್ತರಣೆ

Sumana Upadhyaya
ನವದೆಹಲಿ: ಸೆಪ್ಟೆಂಬರ್ ವರೆಗೆ ಆನ್ ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದರೆ ಪ್ರಯಾಣಿಕರಿಗೆ ಸೇವಾ ಶುಲ್ಕ ವಿನಾಯ್ತಿ ಸಿಗಲಿದೆ. ಕಳೆದ ವರ್ಷ ನವೆಂಬರ್ ನಲ್ಲಿ ನೋಟು ಅಮಾನ್ಯತೆ ನಂತರ ಸರ್ಕಾರ ಆನ್  ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದರೆ ಸೇವಾ ಶುಲ್ಕಕ್ಕೆ ಕೇಂದ್ರ ಸರ್ಕಾರ ವಿನಾಯ್ತಿ ನೀಡಿತ್ತು. ಡಿಜಿಟಲೀಕರಣ ವ್ಯವಸ್ಥೆಗೆ ಪ್ರೋತ್ಸಾಹ ನೀಡಲು ಈ ವಿನಾಯ್ತಿಯನ್ನು ಪ್ರಯಾಣಿಕರಿಗೆ ನೀಡಲಾಗಿತ್ತು. 
ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ರೈಲು ಟಿಕೆಟ್ ಗಳನ್ನು ಬುಕ್ ಮಾಡಿದರೆ ಪ್ರತಿ ಟಿಕೆಟ್ ಮೇಲೆ 20ರಿಂದ 40 ರೂಪಾಯಿ ಸೇವಾ ಶುಲ್ಕ ವಿನಾಯ್ತಿ ಸಿಗುತ್ತದೆ. ಡಿಜಿಟಲ್ ಪಾವತಿ ವಿಧಾನವನ್ನು ಪ್ರೋತ್ಸಾಹಿಸಲು ಸರ್ಕಾರ ಇದನ್ನು ಕಳೆದ ವರ್ಷ ನವೆಂಬರ್ 23ರಿಂದ ಈ ವರ್ಷ ಮಾರ್ಚ್ 31ರವರೆಗೆ ನೀಡಿತ್ತು.
 ನಂತರ ಸರ್ಕಾರ ವಿನಾಯ್ತಿ ಸಮಯವನ್ನು ಜೂನ್ 30ರವರೆಗೆ ವಿಸ್ತರಿಸಿತ್ತು. ಇದೀಗ ಸೇವಾ ಶುಲ್ಕದ ವಿನಾಯ್ತಿಯನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ವಿಧಾನದ ಮೂಲಕ ಪಾವತಿ ವಿಧಾನವನ್ನು ಪ್ರಚುರಪಡಿಸಲು ಮತ್ತು ಪ್ರಯಾಣಿಕರಿಗೆ ಸಹಾಯ ಮಾಡಲು ಸರ್ಕಾರ ಈ ರೀತಿ ಮಾಡಿದೆ. ರೈಲ್ವೆಯ ಟಿಕೆಟ್ ವಿಭಾಗವಾದ ಐಆರ್ ಸಿಟಿಸಿ ಸೇವಾ ಶುಲ್ಕ ವಿನಾಯ್ತಿಯಿಂದ ವರ್ಷಕ್ಕೆ ಸುಮಾರು 500 ಕೋಟಿ ರೂಪಾಯಿ ಕಳೆದುಕೊಳ್ಳಲಿದೆ.
ಆಗುವ ನಷ್ಟವನ್ನು ಭರಿಸುವಂತೆ ರೈಲ್ವೆ ಸಚಿವಾಲಯ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದೆ. ರೈಲ್ವೆಯ ಸೇವಾ ಶುಲ್ಕದ ಆದಾಯದಲ್ಲಿ ಅರ್ಧದಷ್ಟು ಐಆರ್ ಸಿಟಿಸಿ ಹಂಚಿಕೊಳ್ಳುತ್ತದೆ.
SCROLL FOR NEXT