ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಸಾವಿನ ವಾರ್ಷಿಕ ದಿನಾಚರಣೆ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಎಚ್ಚರಿಕೆ ವಹಿಸಿರುವ ಸರ್ಕಾರ ಜಮ್ಮು ಮತ್ತು ಕಾಶ್ಮೀರದಾದ್ಯಂತ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.
ಬುರ್ಹಾನ್ ವಾನಿ ಸಾವಿನ ವಾರ್ಷಿಕ ದಿನಾಚರಣೆ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕನ ನಡೆಸಿದ್ದರು.
ಉನ್ನತಮಟ್ಟದ ಸಭೆ ನಡೆಸಿದ್ದ ಅವರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಭದ್ರತೆ ಕುರಿತಂತೆ ಸೂಚನೆಗಳನ್ನು ನೀಡಿದ್ದರು. ಇದರಂತೆ ವದಂತಿಗಳು ಹರಡುವುದನ್ನು ತಡೆಯುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಇಂದು ರಾತ್ರಿ 10ಗಂಟೆಯವರೆಗೂ ಮೊಬೈಲ್, ಬ್ರಾಡ್ ಬ್ಯಾಂಡ್ ಸೇರಿದಂತೆ ಎಲ್ಲಾ ರೀತಿಂದ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ.
ಅನಂತ್ ನಾಗ್ ಜಿಲ್ಲೆಯಲ್ಲಿ 2016ರ ಜುಲೈ 8ರಂದು ನಡೆಸಲಾಗಿದ್ದ ಎನ್ ಕೌಂಟರ್ ನಲ್ಲಿ ಉಗ್ರ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಲಾಗಿತ್ತು. ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಉಲ್ಬಣಗೊಂಡಿತ್ತು. ನಿಂತರ ಹಿಂಸಾಚಾರ, ಕಲ್ಲು ತೂರಾಟ, ಗೋಲಿಬಾರ್ ನಿಂದಾಗಿ ಕಾಶ್ಮೀರ ತತ್ತರಿಸಿ ಹೋಗಿತ್ತು. 53 ದಿನಗಳ ಬಳಿತ ಕಾಶ್ಮೀರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ತೆರವುಗೊಳಿಸಲಾಗಿತ್ತು. ಇದರಂತೆ ನಾಳೆ ಬುರ್ಹಾನ್ ವಾನಿ ಸಾವಿನ ವಾರ್ಷಿಕ ದಿನಾಚರಣೆಯನ್ನು ನಡೆಸಲು ಕಾಶ್ಮೀರದಲ್ಲಿ ಸಿದ್ಧತೆಗಳು ನಡೆದಿವೆ.