ದೇಶ

ಪಾಕ್ ನಿಂದ ಭಾರತಕ್ಕೆ ಮರಳಿದ ಗೀತಾಗೆ ಕಂಕಣ ಭಾಗ್ಯ: ಸಿಎಂ ಚೌಹಾಣ್'ರಿಂದ ಕನ್ಯಾದಾನ

Manjula VN
ಭೋಪಾಲ್: ಬಾಲ್ಯದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿ 13 ವರ್ಷಗಳ ಕಾಲ ಯಾತನೆ ಅನುಭವಿಸಿ 2015ರಲ್ಲಿ ಭಾರತಕ್ಕೆ ಮರಳಿದ್ದ ಅನಾಥ ಯುವತಿ ಗೀತಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರ ಸಲಹೆಯಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಕನ್ಯಾದಾನ ನೆರವೇರಿಸಲಿದ್ದಾರೆಂದು ತಿಳಿದುಬಂದಿದೆ. 
ವಿದಿಶಾ ಕ್ಷೇತ್ರದ ಸಂಸದರಾದ ಸುಷ್ಮಾ ಸ್ವರಾಜ್ ಅವರು, ಭೋಪಾಲ್ ಗೆ ಬಂದಾಗೆಲ್ಲಾ ಗೀತಾಳನ್ನು ಭೇಟಿ ಮಾಡುತ್ತಿದ್ದರು. ಶನಿವಾರ ಭೋಪಾಲ್ ನಲ್ಲಿ ಗೀತಾಳನ್ನು ಸುಷ್ಮಾ ಭೇಟಿ ಮಾಡಿದ್ದರು. 
ಗೀತಾಳನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಅವರು, ಪ್ರಸ್ತುತ ಗೀತಾಳಿಗೆ 25 ವರ್ಷ ತುಂಬಿದ್ದು, ಗೀತಾ ಆಯ್ಕೆಯಂತೆಯೇ ಆಕೆ ಇಷ್ಟಪಡುವಂತಹ ಸೂಕ್ತ ವರನನ್ನು ಹುಡುಕಲಾಗುವುದು.ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ ಕನ್ಯಾದಾನ ಮಾಡಲಿದ್ದಾರೆಂದು ಹೇಳಿದ್ದರು. 
ಈ ನಡುವೆ ಗೀತಾ ದುಃಖಿತಳಾಗಿದ್ದು, ಪಾಕಿಸ್ತಾನಕ್ಕೆ ಮರಳಲು ಇಚ್ಚಿಸಿದ್ದಾಳೆಂಬ ಮಾತುಗಳಿಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಅವರು, ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಗೀತಾ ದೇವಸ್ಥಾನಕ್ಕೆ ಹೋಗಿದ್ದಾಳೆಯೇ ವಿನಃ ದುಃಖಿತಳಾಗಿದ್ದ ಕಾರಣಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
SCROLL FOR NEXT