ಚೀನಾ ರಾಯಭಾರಿಯೊಂದಿಗೆ ರಾಹುಲ್ ಗಾಂಧಿ
ನವದೆಹಲಿ: ಚೀನಾ-ಭಾರತದ ನಡುವೆ ಡೋಕ್ಲಾಮ್ ವಿಷಯವಾಗಿ ಭಿನ್ನಾಭಿಪ್ರಾಯ ಉಂಟಾಗಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳು ಪ್ರಕಟವಾಗಿದೆ. ಆದರೆ ಈ ವರದಿಗಳನ್ನು ಕಾಂಗ್ರೆಸ್ ಸುಳ್ ಸುದ್ದಿ ಎಂದು ಹೇಳಿದೆ.
ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೆವಾಲ, ಕೆಲವು ಮಾಧ್ಯಮಗಳು ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೆ ಎಂದು ಸುಳ್ ಸುದ್ದಿ ಪ್ರಸಾರ ಮಾಡುತ್ತಿದ್ದಾರೆ. ಚೀನಾಗೆ ಭೇಟಿ ನೀಡಿರುವ ಮೂವರು ಕೇಂದ್ರ ಸಚಿವರನ್ನು ಮಾಧ್ಯಮಗಳು ಪ್ರಶ್ನಿಸುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವುದಿಲ್ಲ, ಆದರೂ ಸುಳ್ ಸುದ್ದಿಯನ್ನು ಪ್ರಕಟಿಸುತ್ತವೆ ಎಂದು ಸುರ್ಜೇವಾಲ ಹೇಳಿದ್ದಾರೆ.
ವಿದೇಶಾಂಗ ಇಲಾಖೆ ಹಾಗೂ ಗುಪ್ತಚರ ಇಲಾಖೆ ಈ ಸುದ್ದಿಯನ್ನು ಹಬ್ಬಿಸಿವೆ. ನಾವು ನಮ್ಮ ನೆರೆಯ ರಾಷ್ಟ್ರಗಳೊಂದಿಗೆ ಇನ್ನೂ ರಾಜತಾಂತ್ರಿಕ ಸಂಬಂಧ ಹೊಂದಿದ್ದೇವೆಯೇ ಎಂದು ಸುರ್ಜೆವಾಲ ಪ್ರಶ್ನಿಸಿದ್ದಾರೆ. ಇನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯ ಸಹ ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿ ಚೀನಾ ರಾಯಭಾರಿಯನ್ನು ಭೇಟಿ ಮಾಡಿದ್ದಾರೋ ಇಲ್ಲವೋ ಎಂಬುದು ಪ್ರಶ್ನೆಯಲ್ಲ ಜಿ-20 ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷರೊಂದಿಗೆ ಗಡಿ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.