ಮೈಸೂರು: ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ನೂತನ ಒಂದು ದಾಖಲೆ ಮಾಡಿದ್ದಾರೆ. ಉದ್ಘಾಟನಾ ಕಾರ್ಯಾಕ್ರಮವೊಂದಕ್ಕೆ ಸರಿಸುಮಾರು 8 ಗಂಟೆ ತಡವಾಗಿ ಬಂದಿರುವುದು ಅವರ ಬೇಜವಾಬ್ದಾರಿ ತನಕ್ಕೆ ಕನ್ನಡಿಯಂತಿದೆ.
ಮೈಸೂರಿನ ನಂಜನಗೂಡಿನಲ್ಲಿ ಸರ್ಕಾರಿ ಹಾಸ್ಟೆಲ್ವೊಂದರ ಉದ್ಘಾಟನೆ ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಆಯೋಜಿಸಲಾಗಿತ್ತು. ಆದರೆ ಎಚ್. ಆಂಜನೆಯ ಅವರು ರಾತ್ರಿ 11 ಗಂಟೆಗೆ ಹಾಸ್ಟೆಲ್ ಗೆ ಬಂದಿದ್ದಾರೆ. ಹಾಸ್ಟೆಲ್ ಉದ್ಘಾಟನೆ ನಂತರ ಭಾಷಣ ಶುರು ಮಾಡಿದ ಅವರು 11.40ಕ್ಕೆ ಭಾಷಣ ಮುಗಿಸಿದ್ದಾರೆ. ಅಲ್ಲಿಯವರೆಗೂ ಹಾಸ್ಟೆಲ್ ವಿದ್ಯಾರ್ಥಿಗಳು ಜಾಗರಣೆ ಮಾಡಿದ್ದಾರೆ.
ಎಚ್ ಆಂಜನೇಯ ಅವರು ರಾತ್ರಿ 9 ಗಂಟೆಗೆ ನಂಜನಗೂಡಿಗೆ ತೆರಳಿದ್ದರು. ಅಲ್ಲಿ ಮೊದಲಿಗೆ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಲೋನ್ ವಿತರಿಸಿ ನಂತರ ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಬೇರೆ ವಿಧಿಯಿಲ್ಲದೆ ಸಚಿವರು ಬರುವವರೆಗೂ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಕಾದುಕುಳಿತಿದ್ದರು. ಸಚಿವರು ಹಾಸ್ಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ ಎಂದು ಹೈಸ್ಕೂಲ್ ವಿದ್ಯಾರ್ಥಿಗಳನ್ನು ಸಚಿವರು ಬರುವ ಐದು ಗಂಟೆ ಮುನ್ನವೇ ಉದ್ಘಾಟನಾ ಸಮಾರಂಭಕ್ಕೆ ಕರೆಸಲಾಗಿತ್ತು. ಆದರೆ ಸಚಿವರು ಬರುವುದು ತಡವಾಗಿದ್ದರಿಂದ ವಿದ್ಯಾರ್ಥಿಗಳು ಕಾದು ಕಾದು ಸುಸ್ತಾದರು.