ಸೇನೆ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ರಾಜಕಾರಣಿಗಳನ್ನು ತುಂಡರಿಸಬೇಕು: ರಾಜಸ್ತಾನ ಸಚಿವ
ಭಾರತೀಯ ಸೇನೆ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡುವ ರಾಜಕಾರಣಿಗಳನ್ನು ತುಂಡು ತುಂಡಾಗಿ ಕತ್ತರಿಸಬೇಕೆಂದು ರಾಜಸ್ತಾನ ರಾಜ್ಯ ಸಚಿವ ರಾಜ್ ಕುಮಾರ್ ರಿನ್ವಾ ಅವರು ಸೋಮವಾರ ಹೇಳಿದ್ದಾರೆ...
ಸಿಕರ್: ಭಾರತೀಯ ಸೇನೆ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡುವ ರಾಜಕಾರಣಿಗಳನ್ನು ತುಂಡು ತುಂಡಾಗಿ ಕತ್ತರಿಸಬೇಕೆಂದು ರಾಜಸ್ತಾನ ರಾಜ್ಯ ಸಚಿವ ರಾಜ್ ಕುಮಾರ್ ರಿನ್ವಾ ಅವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ದೇಶಕ್ಕಾಗಿ ನಮ್ಮ ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಎಂತಹುದ್ದೇ ಪರಿಸ್ಥಿತಿ ಬಂದರೂ ಗಡಿ ಕಾಯುತ್ತಾರೆ. ಅಂತಹ ಭಾರತೀಯ ಸೇನೆ ಕುರಿತಂತೆ ಅವಹೇಳನಕಾರಿ ಹೇಳಿಕೆ ನೀಡುವ ರಾಜಕಾರಣಿಗಳನ್ನು ಐದು ನಿಮಿಷಗಳೊಳಗಾಗಿ ತುಂಡು ತುಂಡಾಗಿ ಕತ್ತರಿಸಬೇಕು. ಇದಕ್ಕಾಗಿ ಹೊಸ ಕಾನೂನನ್ನು ಜಾರಿಗೆ ತರಬೇಕೆಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಾಂಗೆರ್ಸ ನಾಯಕ ಸಂದೀಪ್ ದೀಕ್ಷಿತ್ ಅವರು ಸೇನಾ ಮುಖ್ಯಸ್ಥರ ಕುರಿತಂತೆ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಪಾಕಿಸ್ತಾನ ಸೇನಾ ಮುಖ್ಯಸ್ಥರು ಕೆಟ್ಟ ಭಾಷೆ ಬಳಕೆ ಮಾಡಿದರೆ, ಭಾರತೀಯ ಸೇನಾ ಮುಖ್ಯಸ್ಥರೇಕೆ ಅವರ ಹೇಳಿಕೆಗಳಿಗೆ ಬೀದಿ ಗೂಂಡಾದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದರು.
ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದು ಕರೆದಿದ್ದಕ್ಕೆ ಬಿಜೆಪಿ ತೀವ್ರವಾಗಿ ಕಿಡಿಕಾರಿತ್ತು. ತಮ್ಮ ಹೇಳಿಕೆಗೆ ತೀವ್ರ ಟೀಕೆ ಹಾಗೂ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ಹೇಳಿಕೆ ಕುರಿತು ಯೂ-ಟರ್ನ್ ಹೊಡೆದಿದ್ದ ಸಂದೀಪ್ ದೀಕ್ಷಿತ್ ಅವರು, ಸೇನಾ ಮುಖ್ಯಸ್ಥರ ಕುರಿತು ಹೇಳಿಕೆ ನೀಡುವಾಗ ಎಚ್ಚರವಹಿಸಬೇಕಿತ್ತು. ನಾನು ಬಳಕೆ ಮಾಡಿದ ಪದ ಕುರಿತು ಕ್ಷಮೆಯಾಚಿಸುತ್ತೇನೆಂದು ಹೇಳಿದ್ದರು.