ಮುಂಬೈ: ಸಿಕ್ಕಿಂ ಗಡಿಯಲ್ಲಿ ಚೀನಾದ ಉಪಟಲ ಹೆಚ್ಚಾಗಿದ್ದು ಚೀನಾಕ್ಕೆ ಆರ್ಥಿಕವಾಗಿ ಹೊಡೆತ ನೀಡುವ ಆಂದೋಲನವೊಂದು ಸದ್ದಿಲ್ಲದೇ ದೇಶದೆಲ್ಲೆಡೆ ನಿಧಾನವಾಗಿ ಚುರುಕು ಪಡೆದುಕೊಳ್ಳುತ್ತಿದೆ.
ದೇಶದ ಹಲವು ಭಾಗಗಳಲ್ಲಿ ವಿವಿಧ ಸಂಘಟನೆಗಳು ಬಹಿರಂಗವಾಗಿ ಚೀನಾ ನಿರ್ಮಿತ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆಕೊಟ್ಟಿವೆ, ಮುಂಬೈನಲ್ಲಿ ಶಾಲಾ ಪ್ರಾಂಶುಪಾಲರೇ ತಮ್ಮ ವಿದ್ಯಾರ್ಥಿಗಳಿಗೆ ಚೀನಾ ಉತ್ಪನ್ನಗಳನ್ನು ಕೊಳ್ಳಬೇಡಿ ಎಂದು ಹೇಳುವ ಮೂಲಕ ಚೀನಾಕ್ಕೆ ಪರೋಕ್ಷವಾಗಿ ಹೊಡೆತ ನೀಡಲು ಕೆಲಸಕ್ಕೆ ಮುಂದಾಗಿದ್ದಾರೆ.
ಭಾರತವನ್ನು ತನ್ನ ದೊಡ್ಡ ಮಾರುಕಟ್ಟೆಯನ್ನಾಗಿ ಮಾಡಿಕೊಂಡು, ಮತ್ತೊಂದೆಡೆ ಗಡಿಯಲ್ಲಿ ಕ್ಯಾತೆ ತೆಗೆಯುವ ಚೀನಾಕ್ಕೆ ಪಾಠ ಕಲಿಸಲು ಮುಂಬೈ ಶಾಲಾ ಪ್ರಾಂಶುಪಾಲರ ಸಂಘಟನೆ ನಿರ್ಧರಿಸಿದೆ.
ವಿದ್ಯಾರ್ಥಿಗಳು ಭವಿಷ್ಯದ ನಾಯಗರಿಕರು, ಹೀಗಾಗಿ ಚೀನಾ ನಿರ್ಮಿತ ವಸ್ತು ಬಳಸದಂತೆ ಮಕ್ಕಳಿಗೆ ಮನವಿ ಮಾಡುಲು ನಿರ್ಧರಿಸಿದ್ದೇವೆ. ಇಂಥ ನಿರ್ಧಾರದ ಮೂಲಕ ನಾವು ನಮ್ಮ ನಾಯಕರಿಗೆ ಸಹಕಾರ ನೀಡಬೇಕು. ಈ ಕುರಿತು ಕರಡೊಂದನ್ನು ಸಿದ್ಧಪಡಿಸಿದ್ದೇವೆ. ಇದನ್ನು ಸಂಘಟನೆ ಸದಸ್ಯರು ಅನುಮೋದನೆಗೊಳಿಸಿದಲ್ಲಿ ಮುಂಬೈನಲ್ಲಿರುವ ಎಲ್ಲ 1500 ಶಾಲೆಗಳಿಗೂ ಈ ಬಗ್ಗೆ ಸೂಚನೆ ನೀಡಲಾಗುತ್ತದೆ. ಆದರೆ ಇದು ಮನವಿಯೋ ಹೊರತೂ, ಕಡ್ಡಾಯವಲ್ಲ ಎಂದು ಮುಂಬೈ ಶಾಲಾ ಪ್ರಾಂಶುಪಾಲರ ಸಂಘಟನೆ ಕಾರ್ಯದರ್ಶಿ ಪ್ರಶಾಂತ್ ರೆಡಿಜ್ ಹೇಳಿದ್ದಾರೆ.