ಸೂರತ್: ಅಮರನಾಥ ಯಾತ್ರಾರ್ಥಿಗಳ ಮೇಲೆ ನಡೆದ ಭೀಕರ ಉಗ್ರ ದಾಳಿ ಪ್ರಕರಣದ ಸಂತ್ರಸ್ಥರಿಗೆ ಗುಜರಾತ್ ಸರ್ಕಾರ ತಲಾ 10 ಲಕ್ಷ ಪರಿಹಾರವನ್ನು ಮಂಗಳವಾರ ಘೋಷಣೆ ಮಾಡಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗುಜರಾತ್ ಮುಖ್ಯಮಂತ್ರಿ ರುಪಾನಿ ಅವರು, ದಾಳಿಯಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ತಲಾ 10 ಲಕ್ಷ ರು. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರು. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ಚಾಣಾಕ್ಷತೆ ಮೆರೆದು ಆಗಬಹುದಾಗಿದ್ದ ದೊಡ್ಡ ಪ್ರಮಾದವನ್ನು ತಪ್ಪಿಸಿದ ಚಾಲಕನಿಗೂ ಸಿಎಂ ರುಪಾನಿ ಧನ್ಯವಾದ ಹೇಳಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಪ್ರಮಾದ ತಪ್ಪಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಚಾಲಕ ಕಾರ್ಯ ಮೆಚ್ಚಿರುವ ರುಪಾನಿ ಆತನ ಹೆಸರನ್ನು ಶೌರ್ಯ ಪ್ರಶಸ್ತಿಗೆ ಸೂಚಿಸುವುದಾಗಿಯೂ ಘೋಷಿಸಿದ್ದಾರೆ.
ನಿನ್ನೆ ಉಗ್ರ ದಾಳಿಯಲ್ಲಿ ಮೃತಪಟ್ಟ ಗುಜರಾತ್ ಮೂಲದ ಯಾತ್ರಾರ್ಥಿಗಳ ಪಾರ್ಥೀವ ಶರೀರಗಳು ಇಂದು ಸೂರತ್ ತಲುಪಿದ್ದು, ಈ ವೇಳೆ ಸುದ್ದಿಗಾರರನ್ನು ಉದ್ದೇಶಿಸಿ ರುಪಾನಿ ಮಾತನಾಡಿದರು.
ಉಗ್ರರ ದಾಳಿ ಖಂಡಿಸಿದ ನೇಪಾಳ, ಭೂತಾನ್ ಮತ್ತು ಶ್ರೀಲಂಕಾ
ಇನ್ನು ನಿನ್ನೆ ನಡೆದ ಉಗ್ರ ದಾಳಿಯನ್ನು ನೆರೆಯ ನೇಪಾಳ, ಶ್ರೀಲಂಕಾ ಮತ್ತು ಭೂತಾನ್ ದೇಶಗಳು ಖಂಡಿಸಿದ್ದು, ಉಗ್ರ ಹೇಯ ಕೃತ್ಯಇದಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ನಡೆದ ದಾಳಿಯಲ್ಲಿ 7 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿ, 14ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.