ನವದೆಹಲಿ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಮೊನ್ನೆ ಅಮರನಾಥ ಯಾತ್ರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸಿದ ಕಾಶ್ಮೀರ ಜನತೆಯನ್ನು ಕೇಂದ್ರ ಗೃಹ ಖಾತೆ ಸಚಿವ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ.
ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಮಾಡಿರುವ ಟ್ವೀಟ್ ಗೆ ಓರ್ವ ಮಹಿಳೆ ನೀಡಿದ ಪ್ರತಿಕ್ರಿಯೆ ನೀಡಿ, ಕಾಶ್ಮೀರಿಗಳ ಬಗ್ಗೆ ಯಾರೂ ಕಾಳಜಿ ಹೊಂದಿಲ್ಲ ಎಂದು ಆರೋಪಿಸಿದ್ದರು. ಇದನ್ನು ಕಂಡ ರಾಜನಾಥ್ ಸಿಂಗ್, ಎಲ್ಲಾ ಕಾಶ್ಮೀರಿಗಳು ಇನ್ನೂ ತಮ್ಮತನ ಉಳಿಸಿಕೊಂಡಿದ್ದಾರೆ. ಎಲ್ಲಾ ಕಾಶ್ಮೀರಿಗಳು ಭಯೋತ್ಪಾದಕರಲ್ಲ ಎಂದು ಹೇಳಿದ್ದಾರೆ.
ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರು ನಡೆಸಿದ ಹೇಡಿ ಕೃತ್ಯವನ್ನು ಪ್ರತಿಯೊಬ್ಬರೂ ಖಂಡಿಸಿದ್ದಾರೆ. ಕಾಶ್ಮೀರ ಜನತೆಗೆ ನಾನು ವಂದನೆ ಸಲ್ಲಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ. ಅವರು ನಿನ್ನೆ ಅಮರನಾಥ ಯಾತ್ರಿಕರ ಮೇಲಿನ ದಾಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದರು.
ಕಾಶ್ಮೀರದ ಯಾರೊಬ್ಬರೂ ಕೂಡ ಭಯೋತ್ಪಾದಕರ ಈ ಕೃತ್ಯವನ್ನು ಶ್ಲಾಘಿಸಿಲ್ಲ. ಕಾಶ್ಮೀರತೆಯ ಭಾವನೆ, ನಾವೆಲ್ಲರೂ ಒಂದೇ ಎಂಬ ಮನೋಸ್ಥಿತಿ ಇನ್ನೂ ಅಲ್ಲಿನ ಜನತೆಯಲ್ಲಿ ಇದೆ. ದೇಶಕ್ಕೆ ಕೇಡನ್ನು ಬಯಸುವ ದುಷ್ಟಶಕ್ತಿಗಳ ವಿರುದ್ಧ ಹೋರಾಡಲು ಇದು ನಮಗೆ ನೈತಿಕ ಬೆಂಬಲ ನೀಡುತ್ತದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.
ಇದಕ್ಕೆ ಸುಚಿ ಸಿಂಗ್ ಕಲ್ರ ಎಂಬ ಮಹಿಳೆ ಟ್ವೀಟ್ ಮಾಡಿ, ಕಾಶ್ಮೀರದ ಬಗ್ಗೆ ಆ ಸಂದರ್ಭದಲ್ಲಿ ಯಾರೂ ಕಾಳಜಿ ವಹಿಸಲಿಲ್ಲ. ಜನರನ್ನು ಶಾಂತಗೊಳಿಸುವುದು ತಮ್ಮ ಕೆಲಸವಾಗಿರಲಿಲ್ಲ ಎಂ ದಿದ್ದರು.
ಅದಕ್ಕೆ ಉತ್ತರವಾಗಿ ಸಚಿವರು, ಖಂಡಿತವಾಗಿಯೂ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಶಾಂತಿ ನೆಲೆಗೊಳ್ಳುವಂತೆ ಮಾಡುವುದು ನಮ್ಮ ಕರ್ತವ್ಯ. ಎಲ್ಲಾ ಕಾಶ್ಮೀರಿಗಳು ಭಯೋತ್ಪಾದಕರಲ್ಲ ಎಂದು ಹೇಳಿದ್ದಾರೆ.
ಮೊನ್ನೆ ಸೋಮವಾರ ಸಾಯಂಕಾಲ ಅಮರನಾಥ ಯಾತ್ರಿಕರು ಜಮ್ಮು-ಶ್ರೀನಗರದ ಹೆದ್ದಾರಿ ಖನಬಲ್ ಪ್ರದೇಶದಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದಾಗ ಭಯೋತ್ಪಾಕರು ನಡೆಸಿದ ದಾಳಿಯಲ್ಲಿ 7 ಮಂದಿ ಮೃತಪಟ್ಟು 19 ಮಂದಿ ಗಾಯಗೊಂಡಿದ್ದಾರೆ. ಲಷ್ಕರ್ ಇ ತಯ್ಬಾ ಗುಂಪಿನ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಜಮ್ಮು ಪೊಲೀಸರು ಆರೋಪಿಸಿದ್ದಾರೆ.