ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಮುಂದುವರೆದಿದ್ದು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಪದೇ-ಪದೇ ಕದನ ವಿರಾಮ ಉಲ್ಲಂಘನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಅತ್ಯಲ್ಪ ಸಮಯದಲ್ಲೇ ಸೇನೆಯನ್ನು ಯುದ್ಧಕ್ಕೆ ಸಿದ್ಧಗೊಳಿಸಲು ಅನುವು ಮಾಡಿಕೊಡುವ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ಕೇಂದ್ರ ಸರ್ಕಾರ ಸೇನೆಗೆ ಅಧಿಕಾರ ನೀಡಿದೆ.
ಗರಿಷ್ಠ ಮಟ್ಟದ ಯುದ್ಧ ಸಾಮಾಗ್ರಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಆಂತರಿಕ ವರದಿಯ ಹಿನ್ನಲೆಯಲ್ಲಿ 46 ವಿಧದ ಮದ್ದುಗುಂಡುಗಳು ಮತ್ತು 10 ಬಗೆಯ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸೇನೆಗೆ ಪೂರ್ಣ ಹಣಕಾಸು ಅಧಿಕಾರ ನೀಡಲಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರ ವ್ಯವಸ್ಥೆಗಾಗಿ ರೂ.40,000 ಕೋಟಿ ವೆಚ್ಚವಾಗಬಹುದು ಎನ್ನಲಾಗಿದೆ.
ಸೇನೆಯಲ್ಲಿ ಮದ್ದುಗುಂಡುಗಳ ಭಾರೀ ಕೊರತೆ ಇದೆ ಎಂದು 2015ರಲ್ಲಿಯೇ ಸಿಎಜಿ ವರದಿಯಲ್ಲಿ ತಿಳಿಸಿತ್ತು. 40 ದಿನಗಳ ಯುದ್ಧಕ್ಕೆ ಸಾಕಾಗುವಷ್ಟು ಮದ್ದುಗುಂಡು ಸಂಗ್ರಹದಲ್ಲಿ ಇರಬೇಕು ಎಂಬುದು ನಿಯಮ. ಆದರೆ, ಮದ್ದುಗುಂಡುಗಳ ಭಾರೀ ಕೊರತೆಯಿಂದಾಗಿ ಈ ನಿಯಮವನ್ನು 20 ದಿನಗಳ ಮದ್ದುಗುಡುಗಳಿಗೆ ಇಳಿಸಲಾಗಿತ್ತು.
ಸೇನೆಯ ಯುದ್ಧ ಸನ್ನದ್ಧತೆಯ ಸ್ಥಿತಿಯ ಬಗ್ಗೆ ಸಿಎಜಿ ಮತ್ತು ಸಂಸದೀಯ ಸಮಿತಿ ಕೂಡ ಪ್ರಶ್ನೆಗಳನ್ನು ಎತ್ತಿದ್ದವು. ಮದ್ದು ಗುಂಡು ಮತ್ತಿ ಶಸ್ತ್ರಾಸ್ತ್ರಗಳ ತ್ವರಿತ ಖರೀದಿಗೆ ವ್ಯವಸ್ಥೆ ಮಾಡಬೇಕೆಂದು ಸೇನೆ ಈ ಹಿಂದಿನಿಂದಲೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದೆ.
ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಹಾಗೂ ಚೀನಾ-ಪಾಕಿಸ್ತಾನ-ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ವಾತಾವರಣ ಹಿನ್ನಲೆಯಲ್ಲಿ ಇದೀಗ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲು ಸೇನೆಗೆ ಅಧಿಕಾರ ನೀಡಿದೆ.
ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಸೇನಾ ಸನ್ನದ್ಧತೆ ಕುರಿತಂತೆ ಆಂತರಿಕ ಪರಿಶೋಧನೆ ನಡೆಸಲಾಗಿತ್ತು. ಇದಾದ 10 ದಿನಗಳ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿಯನ್ನು ನಡೆಸಲಾಗಿತ್ತು. ಪರಿಶೋಧನೆ ವೇಳೆ ಸಾಕಷ್ಟು ತೊಡಕುಗಳು ಕಂಡುಬಂದಿದ್ದವು ಎಂದು ಸೇನಾ ಸಚಿವಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics