ನವದೆಹಲಿ: ಸಿಕ್ಕಿಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ಸುದೀರ್ಘ ಸೇನಾ ಮುಖಾಮುಖೀ ಸಾಗಿರುವ ಬೆನ್ನಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇದೇ ಜುಲೈ 26ರಂದು ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರಝಿಲ್, ರಶ್ಯ, ಭಾರತ, ಚೀನ ಮತ್ತು ದಕ್ಷಿಣ ಆಫ್ರಿಕ) ದೇಶಗಳ ರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಜಿತ್ ದೋವಲ್ ಅವರು ಭಾರತ-ಚೀನಾ ಗಡಿ ಮಾತುಕತೆಗಾಗಿ ನಿಯುಕ್ತರಾಗಿ ವಿಶೇಷ ಪ್ರತಿನಿಧಿಯೂ ಆಗಿರುವುದರಿಂದ ಬ್ರಿಕ್ಸ್ ಸಭೆಯಲ್ಲಿ ಸಿಕ್ಕಿಂ ಗಡಿಯಲ್ಲಿನ ಡೊಂಕ್ಲಮ್ ಬಿಕ್ಕಟ್ಟು ಕುರಿತ ಮಾತುಕತೆ ನಡೆಯುವ ನಿರೀಕ್ಷೆ ಇದೆ.
ಭೂತಾನ್-ಭಾರತ-ಚೀನಾ ಟ್ರೈ ಜಂಕ್ಷನ್ ಪ್ರದೇಶದಲ್ಲಿರುವ ಡೊಂಕ್ಲಮ್ ನಲ್ಲಿ ಚೀನಾ ಕೈಗೊಂಡ ವಿವಾದಾತ್ಮಕ ರಸ್ತೆ ನಿರ್ಮಾಣ ಕಾರ್ಯವನ್ನು ಕಳೆದ ಮಾರ್ಚ್ 16ರಂದು ಭಾರತೀಯ ಸೇನೆ ನಿಲ್ಲಿಸಿತ್ತು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಸೇನಾ ಮುಖಾಮುಖಿಯಾಗುವ ಮೂಲಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆ ಪರಿಸ್ಥಿತಿ ಈಗಲೂ ಮುಂದುವರಿದಿದೆ.