ಪ್ರವಾಹದಿಂದ ಗ್ರಾಮಗಳು ಮುಳುಗಡೆಯಾಗಿರುವುದು
ಗುವಾಹಟಿ: ಅಸ್ಸಾಂ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ನಿನ್ನೆ ಮತ್ತೆ 5 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ 26 ಜಿಲ್ಲೆಗಳಿಗೆ ಪ್ರವಾಹದ ಪರಿಣಾಮ ವ್ಯಾಪಕವಾಗಿದ್ದು 17 ಲಕ್ಷ ಮಂದಿ ಸಂಕಷ್ಟದಲ್ಲಿದ್ದಾರೆ.
ಅಸ್ಸಾಂನ ಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದ ಶೇಕಡಾ 77 ಭಾಗ, 134 ಆಕ್ರಮಣಕಾರಿ ತಡೆ ಶಿಬಿರಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಕೆಲವು ಪ್ರಾಣಿಗಳು ಸತ್ತುಹೋಗಿವೆ. ಕೆಲವು ಪ್ರಾಣಿಗಳು ಎತ್ತರದ ಪ್ರದೇಶಗಳಿಗೆ ಹೋಗಿ ಪ್ರಾಣ ರಕ್ಷಿಸಿಕೊಂಡಿವೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ ವರದಿ ಪ್ರಕಾರ, ಅಸ್ಸಾಂ ರಾಜ್ಯದ ಗೋಲಾಘಾಟ್, ಲಖಿಮ್ಪುರ್, ನಾಗಾನ್ ಮತ್ತು ದಕ್ಷಿಣ ಸಲ್ಮಾರಾ ಜಿಲ್ಲೆಗಳಲ್ಲಿ ಪ್ರವಾಹ ಸಂಬಂಧಿ ಘಟನೆಗಳಿಂದ 5 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಈ ವರ್ಷ ನೆರೆ ಪ್ರವಾಹದಿಂದಾಗಿ ರಾಜ್ಯದಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ಸುಮಾರು 2,450 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 86,000 ಹೆಕ್ಟೇರ್ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದೆ.
ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಪ್ರವಾಹದಲ್ಲಿ ಸಿಲುಕಿರುವ ಜನರಿಗೆ ಅಕ್ಕಿ, ಧಾನ್ಯ, ಉಪ್ಪು ಮತ್ತು ಸಾಸಿವೆ ಎಣ್ಣೆ ಪೂರೈಸುತ್ತಿದೆ. ಸುಮಾರು 14,10,968 ಪ್ರಾಣಿಗಳು ಮತ್ತು ಕೋಳಿಗಳ ಮೇಲೆ ಪರಿಣಾಮ ಬೀರಿದೆ.