ದೇಶ

ಪ್ರತೀ ಕದನ ವಿರಾಮ ಉಲ್ಲಂಘನೆ ಹಿಂದೆ ಪಾಕ್ ಸೇನೆ ಕೈವಾಡ: ಡಿಜಿಎಂಒ ಸಭೆಯಲ್ಲಿ ಭಾರತ ಕಿಡಿ

Manjula VN
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿಗಳಲ್ಲಿ ಪದೇ ಪದೇ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ ಹಿನ್ನಲೆಯಲ್ಲಿ ಉಭಯ ದೇಶದ ಸೇನಾ ಮುಖ್ಯಸ್ಥರು ಸೋಮವಾರ ಸಭೆ ನಡೆಸಿ, ಮಾತುಕತೆ ನಡೆಸಿದ್ದಾರೆ. 
ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಾನಲಯ (ಡಿಜಿಎಂಒ) ಹಂತದ ಮಾತುಕತೆ ನಡೆಸಲು ಈ ಬಾರಿ ಪಾಕಿಸ್ತಾನವೇ ಭಾರತಕ್ಕೆ ಆಹ್ವಾನ ನೀಡಿತ್ತು. ಪಾಕಿಸ್ತಾನದ ಈ ಮನವಿಯನ್ನು ಪರಿಗಣಿಸಿರುವ ಭಾರತದ ಉನ್ನತ ಸೇನಾ ಮುಖ್ಯಸ್ಥರು ಇಂದು ನಡೆದ ಸಭೆಯಲ್ಲಿ ಹಾಜರಾಗಿ ಮಾತುಕತೆ ನಡೆಸಿದರು.
ಸಭೆಯಲ್ಲಿ ಉಭಯ ರಾಷ್ಟ್ರಗಳ ಸೇನಾಧಿಕಾರಿಗಳ ನಡುವೆ ವಾಕ್ಸಮರವೇ ನಡೆದಿದೆ. ಎಂದಿನಂತೆ ತನ್ನ ಉದ್ಧಟತನ ಪ್ರದರ್ಶಿಸಿರುವ ಪಾಕಿಸ್ತಾನ ಭಾರತದ ವಿರುದ್ಧವೇ ಆರೋಪಗಳನ್ನು ಮಾಡಿದೆ. 
ಗಡಿಯಲ್ಲಿ ತನ್ನದೇ ಸೇನೆ ಪದೇ ಪದೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಿದ್ದರೂ, ತಾವು ಯಾವ ತಪ್ಪು, ನಿಯಮವನ್ನು ಉಲ್ಲಂಘನೆ ಮಾಡುತ್ತಿಲ್ಲ ಎಂಬುದನ್ನು ಪ್ರದರ್ಶಿಸಲು 
ಹೊರಟಿರುವ ಪಾಕಿಸ್ತಾನ ಭಾರತದ ವಿರುದ್ಧವೇ ಆರೋಪಗಳನ್ನು ಮಾಡಿದೆ. 
ಸಭೆಯಲ್ಲಿ ಮಾತನಾಡಿರುವ ಪಾಕಿಸ್ತಾನ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶನಾಯದ ಮೇಜರ್ ಜನರಲ್ ಸಹಿರ್ ಶಾಂಶದ್ ಮಿರ್ಜಾ ಅವರು, ಪಾಕಿಸ್ತಾನದ ಸೇನೆಯನ್ನು ಗುರಿಯಾಗಿರಿಸಿಕೊಂಡು ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಪರಿಣಾಮ ನಾಲ್ವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆಂದು ಆರೋಪಿಸಿದರು.  
ಇದಕ್ಕೆ ತಿರುಗೇಟು ನೀಡಿದ ಭಾರತೀಯ ಸೇನೆಯ ಕಾರ್ಯಾಚರಣೆಗಳ ಮಹಾ ನಿರ್ದೇಶನಾಲಯದ ಲೆ.ಜ. ಎ.ಕೆ.ಭಟ್ ಅವರು, ಗಡಿಯಲ್ಲಿ ಪಾಕಿಸ್ತಾನವೇ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಿದ್ದು, ದಾಳಿಗೆ ಪ್ರತಿಕ್ರಿಯೆ ನೀಡುವ ಹಕ್ಕು ಭಾರತೀಯ ಸೇನೆಗಿದೆ. ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನು ನೀಡುತ್ತಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆ ಕಾಯ್ದುಕೊಳ್ಳುವಲ್ಲಿ ಭಾರತೀಯ ಸೇನೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. 
ಈ ಹಿಂದೆ ಜೂನ್ 5 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಡಿಜಿಎಂಒ ಹಂತದ ಮಾತುಕತೆ ನಡೆದಿತ್ತು. ಈ ವೇಳೆಯೂ ಪಾಕಿಸ್ತಾನ ಭಾರತದ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಭಾರತೀಯ ಸೇನೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟಿಸಿತ್ತು. ಪಾಕಿಸ್ತಾನದ ಈ ಆರೋಪಗಳನ್ನು ಭಾರತ ತಿರಸ್ಕರಿಸಿತ್ತು. ಈ ವೇಳೆ ಮಾತನಾಡಿದ್ದ ಎ.ಕೆ. ಭಟ್ ಅವರು ಭಾರತೀಯ ಸೇನೆ ವೃತ್ತಿಪರ ಸೇನೆಯಾಗಿದ್ದು, ಯಾವುದೇ ಕಾರಣಕ್ಕೂ ನಾಗರಿಕರಿಗೆ ಸಮಸ್ಯೆಯುಂಟಾಗುವಂತಹ ಯಾವುದೇ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿದ್ದರು. 
SCROLL FOR NEXT