ದೇಶ

ಉಪರಾಷ್ಟ್ರಪತಿ ಅಭ್ಯರ್ಥಿ ಘೋಷಣೆ: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಎನ್​ಡಿಎ ಮಹತ್ವದ ಸಭೆ

Srinivasamurthy VN

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಎನ್ ಡಿಎ ಮೈತ್ರಿಕೂಟದಲ್ಲಿ ಉಪರಾಷ್ಟ್ರಪತಿ ಆಯ್ಕೆ ಕಸರತ್ತು ಜೋರಾಗಿಯೇ ಸಾಗಿದ್ದು, ಈ ಬಗ್ಗೆ ಚರ್ಚೆ ನಡೆಸಲು ಸೋಮವಾರ ಎನ್ ಡಿಎ  ಮೈತ್ರಿಕೂಟದ ಸಭೆ ನಡೆಸಲಾಗುತ್ತಿದೆ.

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕಡೆಯ ದಿನವಾಗಿದ್ದು, ಎನ್​ಡಿಎ ಅಭ್ಯರ್ಥಿ ಘೊಷಣೆ ಸೋಮವಾರ ಸಂಜೆ ಹೊತ್ತಿಗೆ ಆಗಲಿದೆ. ಅಭ್ಯರ್ಥಿ ಹೆಸರನ್ನು ಗುಟ್ಟಾಗಿರಿಸಲಾಗಿದ್ದು, ಇಂದು ನಡೆಯುವ  ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಕಟವಾಗಲಿದೆ. ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ರಾಮನಾಥ ಕೋವಿಂದ ಅವರಿಗೆ ಎನ್​ಡಿಎಯೇತರ ಅನೇಕ ಪಕ್ಷಗಳು ಬೆಂಬಲ ಸೂಚಿಸಿವೆ.

ಅಡ್ಡಮತದಾನದ ಭೀತಿ ಹಿನ್ನಲೆಯಲ್ಲಿ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಳಂಬ
ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಹೆಸರನ್ನು ಘೊಷಣೆ ಮಾಡಿ, ಆ ಅಭ್ಯರ್ಥಿಯು ರಾಷ್ಟ್ರಪತಿ ಚುನಾವಣೆಗೆ ಬೆಂಬಲ ಸೂಚಿಸಿರುವ ಇತರ ಪಕ್ಷಗಳಿಗೆ ಇಷ್ಟವಾಗದಿದ್ದರೆ ಅದರಿಂದ ಮತದಾನದ ಮೇಲೆ ಅಡ್ಡಪರಿಣಾಮ  ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆ ಮತದಾನ ಮುಗಿದ ಬಳಿಕ ಹೆಸರು ಘೊಷಣೆ ಮಾಡುವ ಕಾರ್ಯತಂತ್ರ ಬಿಜೆಪಿ ಅನುಸರಿಸಿದೆ.

ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿ ಘೊಷಣೆ ಆಗುವುದಕ್ಕೂ ಮೊದಲೇ ಎನ್​ಡಿಎ ಬಿಹಾರದ ರಾಜ್ಯಪಾಲ ರಾಮನಾಥ ಕೋವಿಂದ ಅವರನ್ನು ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿತ್ತು. ಇದರಿಂದ  ವಿರೋಧ ಪಕ್ಷಗಳು ದಲಿತ ಕಾರ್ಡನ್ನೇ ಅನಿವಾರ್ಯವಾಗಿ ಬಳಸುವ ಸಂದಿಗ್ಧತೆಗೆ ಒಳಗಾಗಿ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಆಯ್ಕೆ ಮಾಡಿದವು. ಆದರೆ, ಉಪರಾಷ್ಟ್ರಪತಿ ಚುನಾವಣೆಗೆ ಕಾಂಗ್ರೆಸ್ ನೇತೃತ್ವದ 18  ವಿರೋಧ ಪಕ್ಷಗಳು ಮಹಾತ್ಮ ಗಾಂಧಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿವೆ. ಈ ಮೂಲಕ ಆಡಳಿತಾರೂಢ ಎನ್​ಡಿಎ ಅಭ್ಯರ್ಥಿ ಆಯ್ಕೆಗೂ ಮುಂಚೆಯೇ ಅಂತಿಮಗೊಳಿಸಿ ಒಗ್ಗಟ್ಟು  ಕಾಯ್ದುಕೊಳ್ಳುವ ಪ್ರಯತ್ನ ಮಾಡಿದೆ.

ಆಗಸ್ಟ್ 5ರಂದು ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸಂಸತ್ ​ನ ಉಭಯ ಸದನಗಳ ಸದಸ್ಯರು (790) ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದು, ಎನ್​ಡಿಎ 500ಕ್ಕೂ ಹೆಚ್ಚು ಸಂಸದರ ಬೆಂಬಲ ಹೊಂದಿದೆ.

SCROLL FOR NEXT