ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್
ನವದೆಹಲಿ: ಕಳೆದ ವರ್ಷ, 2016ರಲ್ಲಿ ದೇಶದಲ್ಲಿ 11,400 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿಅಂಶ ಪ್ರಕಾರ, 2016ರಲ್ಲಿ 11,400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2015ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 12,602 ಆಗಿತ್ತು ಎಂದು ನಿನ್ನೆ ಅವರು ಲೋಕಸಭೆಯಲ್ಲಿ ಕೃಷಿ ಸಮಸ್ಯೆ ಬಗೆಗಿನ ಚರ್ಚೆ ವೇಳೆ ಉತ್ತರಿಸಿದರು. ಈ ಅಂಕಿಅಂಶ ಇನ್ನೂ ಪ್ರಕಟವಾಗಿಲ್ಲ.
ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೃಷಿ ವಲಯಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೈತರ ಸಮಸ್ಯೆಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಇದಕ್ಕೂ ಮುನ್ನ ಕಾಂಗ್ರೆಸ್ ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ ಸರ್ಕಾರವನ್ನು ಟೀಕಿಸಿದರು.
ಕೃಷಿ ಉತ್ಪಾದನೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಭಾರತೀಯ ಜನತಾ ಪಾರ್ಟಿ ಭರವಸೆ ನೀಡಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರೈತರ ಬಂಡವಾಳ ಮೊತ್ತಕ್ಕಿಂತ 1.5 ಪಟ್ಟು ಹೆಚ್ಚು ಬೆಲೆಯನ್ನು ಉತ್ಪಾದನೆ ಬೆಳೆಗೆ ನೀಡುವುದಾಗಿ ಬಿಜೆಪಿ ಹೇಳಿತ್ತು ಎಂದು ಸಚಿವರು ತಿಳಿಸಿದರು. ಬೆಳೆ ವಿಮೆ ಯೋಜನೆಯಡಿ 3,560 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ರೈತರ ವಿಮೆ ಮೊತ್ತವಾಗಿ 3,548 ಕೋಟಿ ರೂಪಾಯಿ ನೀಡಲಾಗಿದೆ ಎಂದು ಹೇಳಿದರು. ಅದೇ ರೀತಿ, 2015-16ರಲ್ಲಿ ಒಟ್ಟು ಪ್ರೀಮಿಯಂ ಮೊತ್ತ 3, 760 ಕೋಟಿ ರೂಪಾಯಿಗಳಾಗಿದ್ದು, ವಿಮೆ ಮೊತ್ತವಾಗಿ 4 ,7 10 ಕೋಟಿ ರೂಪಾಯಿ ನೀಡಲಾಗಿದೆ ಎಂದು ಸಚಿವ ರಾಧಾ ಮೋಹನ್ ಸಿಂಗ್ ವಿವರಿಸಿದರು.