ನವದೆಹಲಿ: ಖಾಸಗಿತನದ ಹಕ್ಕು ಮೂಲಭೂತ ಹಕ್ಕಲ್ಲ, ಈ ಹಕ್ಕಿನ ಮೇಲೆ ಸರ್ಕಾರದ ನಿರ್ಬಂಧ ಹೇರವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳಿದೆ.
ಖಾಸಗಿತನ ಮೂಲಭೂತ ಹಕ್ಕೇ ಎಂಬ ಐತಿಹಾಸಿಕ ವಿಚಾರದ ಕುರಿತು ಸರ್ವೋಚ್ಛ ನ್ಯಾಯಾಲಯದ 9 ಸದಸ್ಯರ ಪೀಠ ನಿನ್ನೆ ವಿಚಾರಣೆ ನಡೆಸಿತು.
ಖಾಸಗಿತನದ ಹಕ್ಕಿನ ಮೇಲೆ ಹೇರಬಹುದಾದ ನ್ಯಾಯಯುತ ನಿರ್ಬಂಧಗಳ ಮಾನದಂಡ ಏನೆಂಬುದನ್ನು ನಿರ್ಧರಿಸುವುದಕ್ಕೂ ಮುನ್ನ ಖಾಸಗಿತನ ಏನೆಂಬುದನ್ನು ತಿಳಿಯಲು ಪೀಠ ತಿಳಿಯಬಯಸುತ್ತದೆ. ಅಂದರೆ, ಖಾಸಗಿತನದ ಮಿತಗಳು ಯಾವುವು ಮತ್ತು ಇವುಗಳ ಸರ್ಕಾರದ ನೀತಿ ರೂಪಿಸುವುದನ್ನು ತಡೆಯುವಷ್ಟು ವಿಸ್ತೃತವಾಗಿವೆಯೇ ಎಂದು ಪೀಠ ಪ್ರಶ್ನಿಸಿತು.
ಖಾಸಗಿ ಹಕ್ಕಿನ ಬಗ್ಗೆ ಇರುವ ಎಲ್ಲಾ ಅನುಮಾನಗಳನ್ನು ಬಗೆಹರಿಸುವ ಸಲುವಾಗಿ ಎಲ್ಲಾ ಆಯಾಗಳಿಂದಲೂ ನೋಡಲಾಗುವುದು. ಇದಕ್ಕೆ ಕೇಂದ್ರ ಸರ್ಕಾರ ಹಾಗೂ ಇತರರು ಸಹಕಾರ ನೀಡಬೇಕಿದೆ ಎಂದು ನ್ಯಾಯಾಲಯದ ಸೂಚನೆ ನೀಡಿದೆ.
ವಿಚಾರಣೆ ವೇಳೆ ಗೋಪಾಲ್ ಸುಬ್ರಮಣಿಯನ್ ಅವರು. ವಿಚಾರಣೆಯ ಬಹುಮುಖ್ಯ ಅಂಶವೇ ಖಾಸಗಿ ಹಕ್ಕು. ಸಂವಿಧಾನದಲ್ಲೇ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಉಲ್ಲೇಖಿಸಲಾಗಿದೆ. ಜನರಿಗೆ ಖಾಸಗಿ ಹಕ್ಕು ಎಂಬುದು ಸಂವಿಧಾನ ಕಲ್ಪಿಸಿರುವ ಅವಕಾಶವಾಗಿದೆ. ಖಾಸಗಿ ಹಕ್ಕು ಸ್ವಾಭಾವಿಕವಾಗಿ ಬಂದದ್ದು. ವ್ಯಕ್ತಿಯ ಜೊತೆಜೊತೆಗೇ ಇರುವಂಥಹದ್ದು ಮತ್ತು ಅನುವಂಶಿಕವಾಗಿ ಬಂದದ್ದು ಎಂದು ಹೇಳಿದ್ದಾರೆ. ಇದೇ ವೇಳೆ 1954ರ 8 ನ್ಯಾಯಮೂರ್ತಿಗಳ ಪೀಠ ಮತ್ತು 1963ರ 6 ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಖಾಸಗಿ ಹಕ್ಕು, ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿರುವುದು ಸರಿಯಲ್ಲ ಎಂದು ವಾದಿಸಿದ್ದಾರೆ.
ಖಾಸಗಿ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಪರಿವರ್ತಿಸಿದ್ದೇ ಆದರೆ, ಸಲಿಂಗಕಾಮ ಅಕ್ರಮ ಎಂದು ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲನೆ ನಡೆಸಬೇಕಾಗಬಹುದು. ಏಕೆಂದರೆ ಲೈಂಗಿಕ ಆಸಕ್ತಿಯು ಅವರವರ ಖಾಸಗಿತನದ ಹಕ್ಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮದುವೆ ಎಂಬುದು ಖಾಸಗಿತನವಾಗುತ್ತದೆ. ಲೈಂಗಿಕ ಆಸಕ್ತಿ ಎಂಬುದು ಅವರವರ ಖಾಸಗಿ ವಿಷಯವಾಗುತ್ತದೆ. ಹೀಗಾಗಿ ನಾವು ಖಾಸಗಿತನವನ್ನು ಹಕ್ಕು ಎಂದು ಪರಿಗಣಿಸಿದರೆ ಸಲಿಂಗಕಾಮ ಅಕ್ರಮ ಎಂದು ತೀರ್ಪು ನೀಡಿದ್ದನ್ನೂ ಪುನಃ ತೆರೆಯಬೇಕಾಗುತ್ತದೆ ಎಂದು ಪೀಠದಲ್ಲಿದ್ದ ನ್ಯಾ.ಡಿ.ವೈ.ಚಂದ್ರಚೂಡ ಹೇಳಿದರು.
ಆಧಾರ್ ನೋಂದಣಿಗಾಗಿ ದೇಹಕ್ಕೆ ಸಂಬಂಧಿಸಿದ ಮಾಹಿತಿಗಳನ್ನೂ ನೀಡಬೇಕಾಗುತ್ತದೆ. ಇದು ಒಬ್ಬ ವ್ಯಕ್ತಿಯ ಖಾಸಗಿತನದ ಉಲ್ಲಂಘನೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ.