ರಾಹುಲ್ ಗಾಂಧಿ-ಸ್ಮೃತಿ ಇರಾನಿ
ಬೆಂಗಳೂರು: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಸೇರಿದಂತೆ ಅನೇಕ ವಿಷಯಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆಪಾದನೆ ಮಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.
ತಮ್ಮ ಸಿಟ್ಟು, ಆಕ್ರೋಶವನ್ನು ಟ್ವೀಟ್ ಮೂಲಕ ಹೊರ ಹಾಕಿದ ಸಚಿವೆ, ಕಾಂಗ್ರೆಸ್ ಗೆ ಕರಾಳ ಭವಿಷ್ಯ ಕಾಯುತ್ತಿದೆ. ನಮ್ಮ ದೇಶಕ್ಕಲ್ಲ,ಇದನ್ನೆಲ್ಲ ಮಾಡುತ್ತಿರುವುದಕ್ಕೆ ನಿಮಗೆ ಬಿಜೆಪಿಯಿಂದ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ರೋಹಿತ್ ವೇಮುಲ ಕೇಸಿನ ಬಗ್ಗೆ ಪ್ರಸ್ತಾಪಿಸಿ ರೋಹಿತ್ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ದಲಿತ ಎಂಬ ಕಾರಣಕ್ಕೆ ಆತನನ್ನು ಹತ್ಯೆ ಮಾಡಲಾಯಿತು. ರೋಹಿತ್ ಅವರು ಅನುಭವಿಸಿದ ಅನ್ಯಾಯಗಳಿಂದ ಅವರನ್ನು ಕೊಲ್ಲಲಾಯಿತು ಎಂದು ರಾಹುಲ್ ಗಾಂಧಿ ನಿನ್ನೆ ಬೆಂಗಳೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹೇಳಿದ್ದರು.
ವೇಮುಲ ದಲಿತ ಎಂಬ ಏಕೈಕ ಕಾರಣಕ್ಕೆ ಹತ್ಯೆ ಮಾಡಲಾಯಿತು. ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದ ನಾಜಿಗಳಂತೆ ವಾಸ್ತವಗಳನ್ನು ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಸ್ಮೃತಿ ಇರಾನಿ, ನಿಮಗೆ 42 ವರ್ಷವಾದರೂ ಹಿಟ್ಲರ್ ನಿಂದ ಪ್ರೇರಿತವಾದವರು ಯಾರು ಎಂದು ಗೊತ್ತಿಲ್ಲ. ಪ್ರಜಾಪ್ರಭುತ್ವವನ್ನು ದಮನಿಸಿ ತುರ್ತು ಪರಿಸ್ಥಿತಿ ಹೇರಿದ್ದವರು ಯಾರು ಎಂದು ನಿಮ್ಮ ಪಕ್ಷದ ದಾಖಲೆ ನೋಡಿ ಎಂದು 1975ರಲ್ಲಿ ಇಂದಿರಾಗಾಂಧಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸಿದರು.
ತುರ್ತು ಪರಿಸ್ಥಿತಿ ದಿನಗಳು ಕರಾಳವಾಗಿದ್ದವು. ಮಾಧ್ಯಮ ಸೆನ್ಸಾರ್ ಜತೆಗೆ ಭಿನ್ನಮತೀಯರನ್ನು ಜೈಲಿಗಟ್ಟಲಾಗಿತ್ತು ಎಂದು ಸ್ಮೃತಿ ಇರಾನಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics