ಶ್ರೀನಗರ: ಡಿಎಸ್ ಪಿ ಆಯೂಬ್ ಪಂಡಿತ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಾಜಿದ್ ಅಹ್ಮದ್ ಗಿಲ್ಕರ್ ಎನ್ ಕೌಂಟರ್ ನಲ್ಲಿ ಹತ್ಯೆಯಾಗಿದ್ದಾರೆಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರ ದೃಢಪಡಿಸಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಐಜಿಪಿ ಮುನೀರ್ ಖಾನ್ ಅವರು, ಹಿಜ್ಬುಲ್ ಮುಜಾಹಿದ್ದೀನಾ ಸಂಘಟನೆಯ ಉಗ್ರ ಸಾಜಿದ್ ಅಹ್ಮದ್ ಗಿಲ್ಕರ್ ಆಯೂಬ್ ಪಂಡಿತ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಜುಲೈ.12 ರಂದು ಸೇನಾ ಪಡೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಸಾಜಿದ್ ನನ್ನು ಹತ್ಯೆ ಮಾಡಲಾಗಿತ್ತು. ಅಲ್ಲದೆ, ಪ್ರಕಱಣ ಸಂಬಂಧ ಈ ವರೆಗೂ 20 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ಆಯೂಬ್ ಹತ್ಯೆ ಪ್ರಕರಣ ಸಂಬಂಧ ನಡೆಸಲಾಗುತ್ತಿದ್ದ ತನಿಖೆ ವೇಳೆ ಗಿಲ್ಕರ್ ಸೇರಿದಂತೆ ಒಟ್ಟು ನಾಲ್ವರು ದುಷ್ಕರ್ಮಿಗಳು ಭಾಗಿಯಾಗಿರುವುದು ಕಂಡು ಬಂದಿತ್ತು. ಮಸೀದಿಯಿಂದ ಜನರು ಹೊರ ಬರುತ್ತಿದ್ದಂತೆಯೇ ಆರೋಪಿಗಳು ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ಝಾಕೀರ್ ಮುಸಾ ಪರವಾಗಿ ಘೋಷಣೆಗಳನ್ನು ಕೂಗಲು ಆರಂಭಿಸಿದ್ದಾರೆ. ಇದಲ್ಲದೆ, ಕೆಲವರು ಪ್ರತ್ಯೇಕತಾವಾದಿ ಮಿರ್ವಾಯಿಜ್ ಉಮರ್ ಫರೂಕ್'ನನ್ನು ಸ್ವಾಗತಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆಯೂಬ್ ಹತ್ಯೆ ಪ್ರಕರಣದಲ್ಲಿ ಗಿಲ್ಕರ್ ಮುಖ್ಯ ಆರೋಪಿಯಾಗಿದ್ದಾನೆಂದು ತಿಳಿಸಿದ್ದಾರೆ.
ರಂಜಾನ್ ಪ್ರಾರ್ಥನೆ ಹಿನ್ನಲೆಯಲ್ಲಿ ಶ್ರೀನಗರ ಜಮಿಯಾ ಮಸೀದಿ ಬಳಿ ಆಯೂಬ್ ಪಂಡಿತ್ ಎಂಬ ಹಿರಿಯ ಪೊಲೀಸ್ ಅಧಿಕಾರಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆ ಕಲ್ಲು ತೂರಾಟಗಾರರು ಮುಗಿಬಿದ್ದು, ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.