ನವದೆಹಲಿ: ತಮ್ಮ ವೇತನವನ್ನು ತಾವೇ ಹೆಚ್ಚಿಸಿಕೊಳ್ಳುವ ಸಂಸದರ ಹಕ್ಕನ್ನು ಮತ್ತು ಆಧಾರ್ ನಂತಹ ಶಾಸನಬದ್ಧ ಮಹತ್ವದ ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿರುವುದನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಅವರು ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ವರುಣ್ ಗಾಂಧಿ, 1952ರಲ್ಲಿ ವರ್ಷಕ್ಕೆ 123 ದಿನ ನಡೆಯುತ್ತಿದ್ದ ಕಲಾಪ 2016ರಲ್ಲಿ ಕೇವಲ 73 ದಿನ ನಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಅಲ್ಲದೆ ಸಂಸದರ ಸಂಭಾವನೆ ನಿರ್ಧರಿಸಲು ಪ್ರತ್ಯೇಕ ಮಂಡಳಿ ರಚಿಸಬೇಕು ಎಂದಿದ್ದಾರೆ.
ಕಳೆದ ಒಂದು ದಶಕದಲ್ಲಿ ಸಂಸದ ವೇತನ ಶೇ.400ರಷ್ಟು ಹೆಚ್ಚಳವಾಗಿದ್ದು, ಸಂಸದರ ಭಾರಿ ವೇತನ ಹೆಚ್ಚಳ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ವೇತನಕ್ಕೆ ಹೆಚ್ಚಳಕ್ಕಾಗಿ ಒತ್ತಾಯಿಸುತ್ತಿರುವ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ ವರುಣ್ ಗಾಂಧಿ, ಜನರು ಕಷ್ಟದಲ್ಲಿದ್ದಾಗ ಜವಾಹರ್ ಲಾಲ್ ನೆಹರೂ ಅವರ ಸಂಪುಟ ಆರು ತಿಂಗಳ ಕಾಲ ವೇತನ ಪಡೆಯದಿರಲು ನಿರ್ಧರಿಸಿತ್ತು ಎಂದು ಉದಾಹರಣೆ ಕೊಟ್ಟರು.
ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಸುಮಾರು 18 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics