ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ದಾಳಿ ಮಾಡಿದ್ದು, ಪರಿಣಾಮ ಭಾರತೀಯ ಸೇನೆ ಇಬ್ಬರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಖಾಜಿಗಂಡ್ ಪ್ರದೇಶದಲ್ಲಿ ಶನಿವಾರ ಉಗ್ರರು ದಾಳಿ ನಡೆಸಿದ್ದು, ಕೂಡಲೇ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಸುಮಾರು ಮಂದಿ ಉಗ್ರರು ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡುತ್ತಿದ್ದು, ಖಾಸಗಿ ವಾಹವನವೊಂದರಲ್ಲಿ ಅಡಗಿ ಕುಳಿತು ಯೋಧರ ಮೇಲೆ ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದಾರೆ. ಪ್ರಸ್ತುತ ಉಗ್ರರನ್ನು ಸೇನೆ ಹಿಂಬಾಲಿಸಿದ್ದು, ಘಟನಾ ಪ್ರದೇಶದ ಸುಮಾರು 70 ಕಿ.ಮೀ ವ್ಯಾಪ್ತಿಯಲ್ಲಿ ಸೇನೆ ಕೂಬಿಂಗ್ ಕಾರ್ಯಾಚರಣೆ ಆರಂಭಿಸಿದೆ.
ಸೇನಾ ಮೂಲಗಳ ಪ್ರಕಾರ ಉಗ್ರರ ಗುಂಡಿನ ದಾಳಿಯಲ್ಲಿ ಪಶ್ಚಿಮ ಬಂಗಾಳದ ಮಿಡ್ನಾಪುರ್ ಮೂಲದ ಸೇನಾಧಿಕಾರಿ ನಾಯ್ಕ್ ದೀಪಕ್ ಮೈತಿ ಮತ್ತು ತಮಿಳುನಾಡಿನ ತಿರುವಣ್ಣಾ ಮಲೈ ಮೂಲದ ಗ್ರೇನೇಡಿಯರ್ ಮಣಿವಣ್ಣನ್ ಎಂಬ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ. ಇದಲ್ಲದೆ ಆರು ಮಂದಿ ಸೇನಾಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ಬಳಿಕ ಶ್ರೀನಗರ ಹಾಗೂ ಜಮ್ಮು ನಡುವಿನ ಹೆದ್ದಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಸೈನಿಕರನ್ನು ನಿಯೋಜಿಸಲಾಗಿದೆ.